ಐಪಿಎಲ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದಲೇ ಕಮಾಲ್ ಮಾಡಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಒಂಭತ್ತು ವರ್ಷದ ಬಳಿಕ ಐಪಿಎಲ್‌ನಲ್ಲಿ “ಗೋಲ್ಡನ್ ಡಕ್” ಆಗಿದ್ದಾರೆ.
ಡಿ.ವೈ. ಪಾಟೀಲ್ ಮೈದಾನದಲ್ಲಿ ನಡೆದ 15ನೇ ಆವೃತ್ತಿಯ ಐಪಿಎಲ್‌ನ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್, ಇನ್ನಿಂಗ್ಸ್‌ನ ಮೊದಲ ಓವರ್‌ನ ಮೊದಲ ಬಾಲ್‌ನಲ್ಲೇ ಲಿಯಾಮ್ ಲಿವಿಂಗ್‌ಸ್ಟೋನ್ ಎಸೆತದಲ್ಲಿ ಔಟಾದರು. ಆ ಮೂಲಕ ಬರೋಬ್ಬರಿ 9 ವರ್ಷದ ಬಳಿಕ ಗೋಲ್ಡಕ್ ಡಕ್ ಆಗಿದ್ದು, ಈ ಹಿಂದೆ 2013ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೇ ಮೊದಲ ಬಾಲ್‌ನಲ್ಲಿ ವಿಕೆಟ್ ಔಟಾಗಿದ್ದರು.

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಐಪಿಎಲ್‌ನಲ್ಲಿ 9ನೇ ಬಾರಿ ಡಕ್ ಔಟ್ ಆಗಿದ್ದು, ಟಿ20 ಕ್ರಿಕೆಟ್‌ನಲ್ಲಿ 3ನೇ ಬಾರಿ ʼಗೋಲ್ಡನ್ ಡಕ್ʼ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಐಪಿಎಲ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ವರ್ಷಗಳ ಕಾಲ ಐಪಿಎಲ್‌ನ ಲೀಡಿಂಗ್ ರನ್ ಸ್ಕೋರರ್ ಆಗಿ ಮಿಂಚಿರುವ ವಾರ್ನರ್, ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆದರೆ ಪ್ರಸಕ್ತ ಸೀಸನ್‌ನಲ್ಲಿ ಬಲಿಷ್ಠ ಕಮ್ ಬ್ಯಾಕ್ ಮಾಡಿರುವ ಡೇವಿಡ್ ವಾರ್ನರ್, 11 ಪಂದ್ಯಗಳಲ್ಲಿ 53.38ರ ಬ್ಯಾಟಿಂಗ್ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 427 ರನ್‌ಗಳಿಸಿದ್ದಾರೆ.
ಅಲ್ಲದೇ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಡೇವಿಡ್ ವಾರ್ನರ್, 161 ಪಂದ್ಯಗಳನ್ನು ಆಡಿದ್ದಾರೆ. 42.27ರ ಸರಾಸರಿ ಹಾಗೂ 140.78ರ ಸ್ಟ್ರೈಕ್ ರೇಟ್‌ನಲ್ಲಿ 5876 ರನ್‌ಗಳಿಸಿರುವ ವಾರ್ನರ್, 55 ಅರ್ಧಶತಕ ಹಾಗೂ 4 ಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿ ಹೆಚ್ಚು ಅರ್ಧಶತಕ ಬಾರಿಸಿದ ಹೆಗ್ಗಳಿಕೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ.