ಪ್ರಮುಖ ಆಟಗಾರರ ಅನುಪಸ್ಥಿತಿಯೊಂದಿಗೆ ಯುವ ಪಡೆಯ ಬಲದೊಂದಿಗೆ ಬಲಿಷ್ಠ ಮುಂಬೈ ಇಂಡಿಯನ್ಸ್ಗೆ ದಿಟ್ಟ ಪ್ರತ್ಯುತ್ತರ ನೀಡಿದ ಡೆಲ್ಲಿ ಕ್ಯಾಪಿಟಲ್ಸ್, 2022ರ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲೇ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
ಇಲ್ಲಿನ ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ಗಳಿಸಿತು. ಈ ಕಠಿಣ ಸವಾಲನ್ನು ಎದುರಿಸಿದ ಡೆಲ್ಲಿ ಕ್ಯಾಪಿಟಲ್ಸ್ 18.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ಗಳಿಸಿ ಗೆಲುವಿನ ನಗೆಬೀರಿತು. ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ ಸವಾಲು ಎದುರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ, ಲಲಿತ್ ಯಾದವ್(48*) ಹಾಗೂ ಅಕ್ಸರ್ ಪಟೇಲ್(34*) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 15ನೇ ಆವೃತ್ತಿಯ ಐಪಿಎಲ್ನಲ್ಲಿ ಗೆಲುವಿನ ಖಾತೆ ತೆರೆಯಿತು.
ಲಲಿತ್-ಅಕ್ಸರ್ ದಿಟ್ಟ ಹೋರಾಟ
ಮುಂಬೈ ನೀಡಿದ 178 ರನ್ಳನ್ನ ಚೇಸ್ ಮಾಡುವ ಭರದಲ್ಲಿ ಮುಗ್ಗರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ 104 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಜೊತೆಯಾದ ಲಲಿತ್ ಯಾದವ್(48*) ಹಾಗೂ ಅಕ್ಸರ್ ಪಟೇಲ್(38*) ಅವರ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ಗೆಲುವಿನ ನಿರೀಕ್ಷೆಯಲ್ಲಿದ್ದ ಮುಂಬೈ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ, 7ನೇ ವಿಕೆಟ್ಗೆ ಮುರಿಯದ 75 ರನ್ಗಳ ಅದ್ಭುತ ಜೊತೆಯಾಟದ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಜವಾಬ್ದಾರಿಯುತ ಆಟವಾಡಿದ ಲಲಿತ್ ಯಾದವ್ 38 ಬಾಲ್ಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಮೂಲಕ 48* ರನ್ಗಳಿಸಿ ಮಿಂಚಿದರೆ, ಇವರಿಗೆ ಅದ್ಭುತ ಸಾಥ್ ನೀಡಿದ ಅಕ್ಸರ್ ಪಟೇಲ್ 17 ಬಾಲ್ಗಳಲ್ಲಿ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 38* ರನ್ಗಳಿಸಿ ಡೆಲ್ಲಿ ತಂಡದ ಹೀರೋ ಆಗಿ ಮಿಂಚಿದರು.
ಡೆಲ್ಲಿ ಆರಂಭಿಕ ಆಘಾತ
ಮುಂಬೈ ನೀಡಿದ ಕಠಿಣ ಸವಾಲು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಟಿಮ್ ಸೈಫರ್ಟ್ ಹಾಗೂ ಪೃಥ್ವಿ ಶಾ ಮೊದಲ ವಿಕೆಟ್ಗೆ 30 ರನ್ಗಳ ಉತ್ತಮ ಆರಂಭ ಒದಗಿಸಿದರು. ಆದರೆ ಇನ್ನಿಂಗ್ಸ್ನ 4ನೇ ಓವರ್ ಬೌಲಿಂಗ್ ಮಾಡಿದ ಮುರುಗನ್ ಅಶ್ವಿನ್ ಒಂದೇ ಓವರ್ನಲ್ಲಿ ಟಿಮ್ ಸೈಫರ್ಟ್(21) ಹಾಗೂ ಮನ್ದೀಪ್ ಸಿಂಗ್(0) ವಿಕೆಟ್ ಪಡೆದು ಡೆಲ್ಲಿ ಪಡೆಗೆ ಶಾಕ್ ನೀಡಿದರು. ಇವರ ಬೆನ್ನಲ್ಲೇ ನಾಯಕ ರಿಷಬ್ ಪಂತ್(1) ಇಲ್ಲದ ಹೊಡೆತಕ್ಕೆ ಯತ್ನಿಸಿ ಥೈಮಲ್ ಮಿಲ್ಸ್ ಅವರ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ಹಂತದಲ್ಲಿ 4ನೇ ವಿಕೆಟ್ಗೆ ಜೊತೆಯಾದ ಆರಂಭಿಕ ಆಟಗಾರ ಪೃಥ್ವಿ ಶಾ(38) ಹಾಗೂ ಲಲಿತ್ ಯಾದವ್(25*) 40 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಪೃಥ್ವಿ ಶಾ, ರನ್ಗಳಿಸುವ ಆತುರದಲ್ಲಿ ಬಿಸಿಲ್ ಥಂಪಿ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರೋಮನ್ ಪೋವಲ್(0) ಯಾವುದೇ ರನ್ಗಳಿಸಿದೆ ಪೆವಿಲಿಯನ್ ಸೇರಿದರು. ಆದರೆ 5ನೇ ಕ್ರಮಾಂಕದಲ್ಲಿ ಬಂದ ಆಲ್ರೌಂಡರ್ ಶಾರ್ದೂಲ್ ಥಾಕೂರ್ 22(11) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ವಿಕೆಟ್ ಒಪ್ಪಿಸಿದರು.
ಥಂಪಿ-ಅಶ್ವಿನ್ ಬೌಲಿಂಗ್ ದಾಳಿ
ಬ್ಯಾಟ್ಸಮನ್ಗಳ ಉತ್ತಮ ಪ್ರದರ್ಶನದಿಂದ ಮಿಂಚಿದ ಮುಂಬೈ ಇಂಡಿಯನ್ಸ್ಗೆ ಬೌಲರ್ಗಳು ಕೂಡ ಸಾಥ್ ನೀಡಿದರು. ಪ್ರಮುಖವಾಗಿ ಮುರುಗನ್ ಅಶ್ವಿನ್(2/14) ಹಾಗೂ ಬಾಸಿಲ್ ಥಂಪಿ(3/26) ಪರಿಣಾಮಕಾರಿ ಬೌಲಿಂಗ್ ಮೂಲಕ ಮಿಂಚಿದರು. ಕಠಿಣ ಟಾರ್ಗೆಟ್ ಎದುರಿಸಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಇನ್ನಿಂಗ್ಸ್ನ 4ನೇ ಓವರ್ನಲ್ಲಿ ದಾಳಿಗೆ ಇಳಿದ ಮುರುಗನ್ ಅಶ್ವಿನ್, ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ತಂಡಕ್ಕೆ ಮೇಲುಗೈ ನೀಡಿದರು. ಈ ಅವಕಾಶವನ್ನ ಬಳಿಸಿಕೊಂಡ ಬಾಸಿಲ್ ಥಂಪಿ 4 ಓವರ್ಗಳಲ್ಲಿ 35 ರನ್ಗಳಿಗೆ 3 ವಿಕೆಟ್ ಪಡೆದು ಮಿಂಚಿದರು.
ಮುಂಬೈ ಬೃಹತ್ ಮೊತ್ತ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಡೆಲ್ಲಿ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ ಇಶಾನ್ ಕಿಶನ್ 81*(48) ತಂಡದ ಮೊತ್ತ ಹೆಚ್ಚಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮ(41), ತಿಲಕ್ ವರ್ಮ(22) ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್ದೀಪ್ ಯಾದವ್ 3/18 ಹಾಗೂ ಕಲೀಲ್ ಅಹ್ಮೆದ್ 2/27 ಉತ್ತಮ ಬೌಲಿಂಗ್ ಪ್ರದರ್ಶಿಸಿದರು.