ನಾಯಕ ಫಾಫ್ ಡುಪ್ಲೆಸ್ಸಿ(88) ಹಾಗೂ ವಿರಾಟ್ ಕೊಹ್ಲಿ(41*) ಅತ್ಯದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿತು. ಫಾಫ್ ಡುಪ್ಲೆಸ್ಸಿ, ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ಅವರುಗಳ ಸ್ಪೋಟಕ ಆಟದಿಂದ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 205 ರನ್‌ಗಳ ಬೃಹತ್ ಮೊತ್ತ ಪೇರಿಸುವ ಮೂಲಕ ಪಂಜಾಬ್ಸಿ ತಂಡಕ್ಕೆ 206 ರನ್‌ಗಳ ಟಾರ್ಗೆಟ್ ನೀಡಿದೆ.
ಡುಪ್ಲೆಸ್ಸಿ ಸ್ಪೋಟಕ ಬ್ಯಾಟಿಂಗ್:
ಆರ್‌ಸಿಬಿ ಪರ ಸಿಡಿಲಬ್ಬರದ ಆಟವಾಡಿದ ಫಾಫ್ ಡುಪ್ಲೆಸ್ಸಿ, ಪಂಜಾಬ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆ ಸುರಿಸಿದ ಡುಪ್ಲೆಸ್ಸಿ, ಎದುರಾಳಿ ಬೌಲರ್‌ಗಳನ್ನು ಧೂಳಿಪಟ ಮಾಡಿದರು. ಕೇವಲ 57 ಬಾಲ್‌ಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 88 ರನ್‌ಗಳಿಸಿ ಅಬ್ಬರಿಸಿದರು. ಅಲ್ಲದೇ ವಿರಾಟ್ ಕೊಹ್ಲಿ ಜೊತೆಗೂಡಿ 2ನೇ ವಿಕೆಟ್‌ಗೆ 118 ರನ್‌ಗಳ ಅದ್ಭುತ ಜೊತೆಯಾಟವಾಡಿ ತಂಡದ ಮೊತ್ತವನ್ನ ಹೆಚ್ಚಿಸಿದರು.
ನಾಯಕನಿಗೆ ಕೊಹ್ಲಿ ಸಾಥ್:
ಇನ್ನಿಂಗ್ಸ್ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಆರ್‌ಸಿಬಿ ತಂಡದ ಹೊಸ ನಾಯಕನಿಗೆ ಸಾಥ್ ನೀಡಿದ ಹಳೆ ನಾಯಕ ವಿರಾಟ್ ಕೊಹ್ಲಿ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಜವಾಬ್ದಾರಿಯ ಆಟವಾಡಿದ ಕೊಹ್ಲಿ ಸಹ 29 ಬಾಲ್‌ಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 41* ರನ್‌ಗಳಿಸಿದರು. 2ನೇ ಕ್ರಮಾಂಕದಲ್ಲಿ ಬಂದ ದಿನೇಶ್ ಕಾರ್ತಿಕ್ 14 ಬಾಲ್‌ಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 32* ರನ್‌ಗಳಿಸಿ ಬಿರುಸಿನ ಬ್ಯಾಟಿಂಗ್‌ನಿಂದ ಅಬ್ಬರಿಸಿದರು. ಅಲ್ಲದೇ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ 3ನೇ ವಿಕೆಟ್‌ಗೆ ಅಜೇಯ 37 ರನ್‌ಗಳ ಜೊತೆಯಾಟವಾಡಿದರು.
ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ಅನುಜ್ ರಾವತ್ 2 ಬೌಂಡರಿ, 1 ಸಿಕ್ಸರ್‌ನಿಂದ 21(20) ರನ್‌ಗಳಿಸಿದರು. ಅಲ್ಲದೇ ಫಾಫ್ ಡುಪ್ಲೆಸ್ಸಿ ಹಾಗೂ ಅನುಜ್ ರಾವತ್ ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟವಾಡಿ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಪಂಜಾಬ್ ಕಿಂಗ್ಸ್ ಪರ ರಾಹುಲ್ ಚಹರ್ 1/22 ಹಾಗೂ ಅರ್ಷದೀಪ್ ಸಿಂಗ್ 1/31 ವಿಕೆಟ್ ಪಡೆದರು.