IPL 2022- DC Vs PBKS – Match No 64- Who will win today’s IPL match – ಗೆಲುವಿನ ಜಪದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ – ಗೆಲುವು ಯಾರಿಗೆ ?
ಮೇ 16. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 64. ಮುಂಬೈನ ಡಿ.ವೈ. ಪಾಟೀಲ್ ಅಂಗಣ. ರಾತ್ರಿ 7.30. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಹಣಾಹಣಿ.
ಹೌದು, ಈ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಮಹತ್ವದ ಪಂದ್ಯವಾಗಿದೆ. ಉಭಯ ತಂಡಗಳಿಗೆ ಪ್ಲೇ ಆಫ್ ಎಂಟ್ರಿಪಡೆಯುವ ಅವಕಾಶ ಸಿಗಬೇಕಾದ್ರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಸೋಲು ಗೆಲುವಿನ ಹಾದಿಯಲ್ಲಿ ಸಾಗಿ ಬಂದಿರುವ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚಿತ್ತ ಒಂದೇ. ಅದು ಪ್ಲೇ ಆಫ್ ಗೆ ಎಂಟ್ರಿ ಪಡೆಯುವ ಕಸರತ್ತು.
ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸ್ವಲ್ಪ ಹೆಚ್ಚಿನ ಅವಕಾಶವಿದೆ. ಆದ್ರೂ ರನ್ ರೇಟ್ ಉತ್ತಮ ಪಡಿಸಿಕೊಂಡ್ರೆ ಪಂಜಾಬ್ ಕಿಂಗ್ಸ್ ಗೂ ಅವಕಾಶವಿದೆ.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಆಡಿರುವ 12 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನದಲ್ಲಿದ್ರೆ, ಪಂಜಾಬ್ ಕಿಂಗ್ಸ್ ಏಳನೇ ಸ್ಥಾನದಲ್ಲಿದೆ.
ಇದೀಗ 13ನೇ ಪಂದ್ಯವನ್ನು ಆಡುತ್ತಿರುವ ಉಭಯ ತಂಡಗಳು ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ರೆ ಪ್ಲೇ ಆಫ್ ಗೆ ಎಂಟ್ರಿ ಪಡೆಯುವ ಸಾಧ್ಯತೆಗಳಿವೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಸಮಸ್ಯೆ ಕಾಡುತ್ತಿದೆ. ಡೇವಿಡ್ ವಾರ್ನರ್ ಬ್ಯಾಟ್ ನಿಂದ ನೀರಿನಂತೆ ರನ್ ಹರಿದು ಬರುತ್ತಿದೆ. ಆದ್ರೆ ಪೃಥ್ವಿ ಶಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡುತ್ತಿದೆ. ಟೈಫೈಡ್ ನಿಂದ ಚೇತರಿಸಿಕೊಂಡಿರುವ ಪೃಥ್ವಿ ಶಾ ಈ ಪಂದ್ಯವನ್ನು ಆಡುವುದು ಅನುಮಾನವಾಗಿದೆ. ಈಗಾಗಲೇ ಮನ್ ದೀಪ್ ಸಿಂಗ್ ಮತ್ತು ಎಸ್. ಭರತ್ ಅವಕಾಶ ಸಿಕ್ಕಿದ್ರೂ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಯಶ್ ಧೂಲ್ ಅವರು ಡೇವಿಡ್ ವಾರ್ನರ್ ಜೊತೆ ಇನಿಂಗ್ಸ್ ಆರಂಭಿಸಿದ್ರೂ ಅಚ್ಚರಿ ಏನಿಲ್ಲ.
ಇನ್ನೊಂದೆಡೆ ನಾಯಕ ರಿಷಬ್ ಪಂತ್ ಅವರಿಂದ ನೈಜ ಆಟ ಇನ್ನೂ ಬಂದಿಲ್ಲ. ನಾಯಕತ್ವದ ಒತ್ತಡ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ. ಹಾಗೇ ಲಲಿತ್ ಯಾದವ್ ಬ್ಯಾಟ್ ನಿಂದ ನಿರೀಕ್ಷಿತ ರನ್ ಗಳು ಬರುತ್ತಿಲ್ಲ. ಮಿಟ್ಚೆಲ್ ಮಾರ್ಶ್ ಫಾರ್ಮ್ ಕಂಡುಕೊಂಡಿರುವುದು ಸಮಾಧಾನಕರ ಸಂಗತಿ. ಹಾಗೇ ರೊವ್ಮನ್ ಪೊವೆಲ್ ಕೂಡ ಪಂದ್ಯದ ಗತಿಯನ್ನು ಅರಿತುಕೊಂಡು ಬ್ಯಾಟ್ ಬೀಸಬೇಕು. IPL 2022- DC Vs PBKS – Match No 64- Who will win today’s IPL match
ಇನ್ನು ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಗಳು. ಇನ್ನೊಂದೆಡೆ ಆನ್ರಿಚ್ ನೊಕಿಯಾ, ಶಾರ್ದೂಲ್ ಥಾಕೂರ್, ಚೇತನ್ ಸಕಾರಿಯಾ ಇನ್ನಷ್ಟು ಮಾರಕವಾಗಿ ಪರಿಣಮಿಸಬೇಕಿದೆ.
ಅದೇ ರೀತಿ ಪಂಜಾಬ್ ಕಿಂಗ್ಸ್ ತಂಡ ಕೂಡ ಸ್ವಲ್ಪ ಮಟ್ಟಿನ ಸುಧಾರಣೆಯನ್ನು ಕಾಣಬೇಕಿದೆ. ಶಿಖರ್ ಧವನ್ ಸಮಯೋಚಿತವಾಗಿ ಆಡಿದ್ರೆ ಸಮಸ್ಯೆ ಇಲ್ಲ. ಜಾನಿ ಬೇರ್ ಸ್ಟೋವ್ ಆರಂಭಿಕನಾಗಿ ಯಶ ಸಾಧಿಸಿದ್ದಾರೆ. ಆದ್ರೆ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಮತ್ತು ಮ್ಯಾಚ್ ಫಿನಿಶರ್ ನ ಕೊರತೆ ಕಾಡುತ್ತಿದೆ. ಮಯಾಂಕ್ ಅಗರ್ ವಾಲ್ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವುದು ಉತ್ತಮ ನಿರ್ಧಾರ. ಲಿಯಾಮ್ ಲಿವಿಂಗ್ ಸ್ಟೋನ್ ಉತ್ತಮ ಫಾರ್ಮ್ ನಲ್ಲಿದ್ರೂ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕು. ಭಾನುಕಾ ರಾಜಪಕ್ಷೆ ಮತ್ತು ಜಿತೇಶ್ ಶರ್ಮಾ ಬ್ಯಾಟ್ ನಿಂದಲೂ ರನ್ ಗಳು ಹರಿದು ಬರಬೇಕು. ರಿಶಿ ಧವನ್ ಆಲ್ ರೌಂಡ್ ಆಟ ತಂಡಕ್ಕೆ ಪ್ಲಸ್ ಪಾಯಿಂಟ್ ಆಗುತ್ತಿದೆ. ರಬಾಡಾ, ಆರ್ಶಾದೀಪ್ ಸಿಂಗ್ ಲಯಬದ್ಧವಾಗಿ ಬೌಲಿಂಗ್ ಮಾಡಿದ್ರೆ ಮಾಯಾಂಕ್ ಅಗರ್ ವಾಲ್ ಗೆ ಜಾಸ್ತಿ ಟೆನ್ಷನ್ ಇಲ್ಲ. ಹಾಗೇ ರಾಹುಲ್ ಚಾಹರ್ ಮತ್ತು ಹಪ್ರಿತ್ ಬ್ರಾರ್ ಅವರು ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ.
ಒಟ್ಟಿನಲ್ಲಿ ಉಭಯ ತಂಡಗಳು ಈ ಹಿಂದಿನ ಪಂದ್ಯಗಳಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಕಣಕ್ಕಿಳಿಯಬೇಕು.