IPL 2022 DC-Prithvi Shaw – ಮ್ಯಾಜಿಕ್ ಬ್ಯಾಟರ್ ಪೃಥ್ವಿ ಶಾ.. ! ಛೋಟಾ ಭೀಮ್ ಆಟಕ್ಕೊಂದು ಸಲಾಂ..!

ಯೋ ಯೋ ಟೆಸ್ಟ್ ನಲ್ಲಿ ಫೇಲ್.. ಫಿಟ್ ನೆಸ್ ಇಲ್ಲ. ಅಡ್ಡ ದಾರಿ ಹಿಡಿದಿರುವ ಹುಡುಗ.. ಟೀಮ್ ಇಂಡಿಯಾದಲ್ಲೂ ಸ್ಥಾನವಿಲ್ಲ… ಹೇಳಿದ ಮಾತು ಕೇಳಲ್ಲ. ಹೀಗೆ ನಾನಾ ಟೀಕೆಗಳನ್ನು ಎದುರಿಸುತ್ತಿದ್ದ ಪೃಥ್ವಿ ಶಾ, ಒಂದೇ ಒಂದು ಇನಿಂಗ್ಸ್ ನಲ್ಲಿ ಉತ್ತರ ನೀಡಿದ್ದಾರೆ.
ಅದು 15ನೇ ಆವೃತ್ತಿಯ 15ನೇ ಪಂದ್ಯ.. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಹೋರಾಟ. ಟಾಸ್ ಸೋತ್ರೂ ಡೆಲ್ಲಿ ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು.
ಡೆಲ್ಲಿ ತಂಡದ ಆರಂಭಿಕ ಪೃಥ್ವಿ ಶಾ ಜೊತೆ ಡೇವಿಡ್ ವಾರ್ನರ್ ಆರಂಭಿಕರಾಗಿ ಕಣಕ್ಕಿಳಿದಿದ್ರು. ಎಲ್ಲರೂ ಡೇವಿಡ್ ವಾರ್ನರ್ ಆಟವನ್ನು ಎದುರು ನೋಡುತ್ತಿದ್ದರು. ಆದ್ರೆ ಡಿ ವೈ ಪಾಟೀಲ್ ಅಂಗಣದಲ್ಲಿ ಆಗಿದ್ದೇ ಬೇರೆ.
ಅದೇನು ಮೂಡ್ ನಲ್ಲಿದ್ರೋ ಗೊತ್ತಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಗಳನ್ನು ಪೃಥ್ವಿ ಶಾ ಆರಂಭದಲ್ಲೇ ದಿಕ್ಕು ತಪ್ಪಿಸುವಂತೆ ಮಾಡಿದ್ರು.
ನೋಡೋಕೆ ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿಯಲ್ಲಿ ಹೊಡಿಬಡಿ ಆಟದಂತಿತ್ತು. ಹಾಗಂತ ರಟ್ಟೆಯ ಬಲವಲ್ಲ. ಬದಲಾಗಿ ಕ್ರಿಕೆಟ್ ನ ತಾಂತ್ರಿಕ ಕೌಶಲ್ಯಗಳ ಹೊಡೆತಗಳು.. ಅಬ್ಬಾ.. ಒಂದೊಂದು ಬೌಂಡರಿಗಳು ಅತ್ಯದ್ಭುತವಾಗಿದ್ದವು. ಸಿಡಿಸಿದ್ದ 9 ಬೌಂಡರಿಗಳು ಮತ್ತು ಎರಡು ಸಿಕ್ಸರ್ ಗಳು ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತಿತ್ತು. ಅಷ್ಟೊಂದು ಮನಮೋಹಕ ಆಟವನ್ನು ಪೃಥ್ವಿ ಶಾ ಆಡಿದ್ದರು.
30 ಎಸೆತಗಳಲ್ಲಿ 50 ರನ್.. 34 ಎಸೆತಗಳಲ್ಲಿ 61 ರನ್… ಪೆವಿಲಿಯನ್ ಗೆ ಪೃಥ್ವಿ ಶಾ ಹಿಂತಿರುಗಿದ್ದಾಗ ಡೇವಿಡ್ ವಾರ್ನರ್ ಜೊತೆ ಮೊದಲ ವಿಕೆಟ್ ಗೆ 67 ರನ್ ಗಳನ್ನು ಕಲೆ ಹಾಕಿದ್ದರು. ವಿಶೇಷತೆ ಅಂದ್ರೆ ಡೇವಿಡ್ ವಾರ್ನರ್ ಗಳಿಸಿದ್ದು ಕೇವಲ 4 ರನ್. ಪೃಥ್ವಿ ಶಾ 61 ರನ್ ಸಿಡಿಸಿದ್ದರು.
ಹಾಗಂತ ಈ ರೀತಿಯ ಜೊತೆಯಾಟ ಇದೇನು ಮೊದಲ ಸಲವಲ್ಲ. ಈ ಹಿಂದೆ ಲಂಕಾದ ಸನತ್ ಜಯಸೂರ್ಯ ಮತ್ತು ರಮೇಶ್ ಕಲುವಿತರಣ ಕೂಡ ಇದೇ ರೀತಿಯ ಆಟವನ್ನಾಡಿದ್ರು.

ಪೃಥ್ವಿ ಶಾ ಆಟದ ಸೊಬಗಿಗೆ ಕ್ರಿಕೆಟ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಪೃಥ್ವಿ ಶಾ ಆಟಕ್ಕೆ ಬಹು ಪರಾಕ್ ಅಂತಿದ್ದಾರೆ ಕ್ರಿಕೆಟ್ ಪ್ರೇಮಿಗಳು.
ಕೆಲವು ಅಭಿಮಾನಿಗಳಂತೂ ಬಾಲ್ಯದ ದಿನಗಳಲ್ಲಿ ಆಡುತ್ತಿದ್ದ ಕ್ರಿಕೆಟ್ ಆಟದ ತಂತ್ರಗಳನ್ನು ನೆನಪು ಮಾಡಿಕೊಂಡಿದ್ದಾರೆ. ಓವರ್ ನ ಐದು ಎಸೆತಗಳನ್ನು ಆಡಿ ಕೊನೆಯ ಎಸೆತದಲ್ಲಿ ಒಂಟಿ ರನ್ ತೆಗೆದು ಮತ್ತೆ ಬ್ಯಾಟಿಂಗ್ ಮಾಡುವ ಮಕ್ಕಳಂತೆ ಪೃಥ್ವಿ ಶಾ ಕಾಣುತ್ತಿದ್ದರು. IPL 2022 DC-Prithvi Shaw’s quickfire 61-run knock-
ಯಾಕಂದ್ರೆ ಪೃಥ್ವಿ ಶಾ ಒಂಟಿ ರನ್ ಗಿಂತ ಹೆಚ್ಚು ರನ್ ದಾಖಲಿಸಿದ್ದು ಬೌಂಡರಿ ಮತ್ತು ಸಿಕ್ಸರ್ ಗಳಿಂದಲೇ. 9 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 48 ರನ್ ದಾಖಲಿಸಿದ್ದರು. ಇನ್ನುಳಿದ 13 ರನ್ ಗಳು ಡಬಲ್ಸ್ ಮತ್ತು ಸಿಂಗಲ್ಸ್ ರನ್ ಗಳಿಂದ ಬಂದಿದೆ.
ಹೀಗಾಗಿ ಪವರ್ ಪ್ಲೇ ನಲ್ಲಿ ಡೇವಿಡ್ ವಾರ್ನರ್ ಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ. ಬದಲಾಗಿ ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿಯನ್ನು ಪ್ರೇಕ್ಷಕನಾಗಿ ನಾನ್ ಸ್ಟ್ರೈಕರ್ ನಲ್ಲಿ ನೋಡುತ್ತಿದ್ದರು ಡೇವಿಡ್ ವಾರ್ನರ್.
ಪೃಥ್ವಿ ಶಾ ಆಟದ ಅಬ್ಬರಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿಗಳು ಕಕ್ಕಾಬಿಕ್ಕಿಯಾದ್ರು. ಕೊನೆಗೂ ಕೆ.ಗೌತಮ್ ಎಸೆತದಲ್ಲಿ ಪೃಥ್ವಿ ಶಾ ಔಟಾದ್ರು. ಅಲ್ಲಿಗೆ ಪೃಥ್ವಿ ಶಾ ಅವರ ಮಹೋನ್ನತ ಇನಿಂಗ್ಸ್ ಕೂಡ ಕೊನೆಗೊಂಡಿತ್ತು.