ಮಧ್ಯಮ ಕ್ರಮಾಂಕದ ಆಟಗಾರ ಜಿತೇಶ್ ಶರ್ಮ(44) ಏಕಾಂಗಿ ಹೋರಾಟದ ನಡುವೆಯೂ ಶಾರ್ದೂಲ್ ಥಾಕೂರ್(4/36) ಅದ್ಭುತ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 17 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿರುವ ಡೆಲ್ಲಿ, ಪ್ಲೇ-ಆಫ್ ಹೊಸ್ತಿಲಿಗೆ ಬಂದು ತಲುಪಿದೆ.
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159 ರನ್‌ಗಳಿಸಿತು. ಈ ಗುರಿಬೆನ್ನತ್ತಿದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 142 ರನ್‌ಗಳಿಸುವ ಮೂಲಕ 17 ರನ್‌ಗಳ ಹೀನಾಯ ಸೋಲು ಕಂಡಿತು.

ಮಾರ್ಷ್ ಅರ್ಧಶತಕದ ಆಸರೆ:
ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ಇನ್ನಿಂಗ್ಸ್‌ನ ಮೊದಲ ಬಾಲ್‌ನಲ್ಲೇ ಡೇವಿಡ್ ವಾರ್ನರ್(0) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವಾಡಿದ ಸರ್ಫರಾಜ಼್ ಖಾನ್(32) ಹಾಗೂ ಮಿಚೆಲ್ ಮಾರ್ಷ್ ತಂಡಕ್ಕೆ ಚೇತರಿಕೆ ನೀಡಿದರೆ. ಬಳಿಕ ಕಣಕ್ಕಿಳಿದ ಲಲಿತ್ ಯಾದವ್(24) ಉಪಯುಕ್ತ ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಪಂಜಾಬ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಮಿಚೆಲ್ ಮಾರ್ಷ್ 63 ರನ್(48 ಬಾಲ್, 4 ಬೌಂಡರಿ, 3 ಸಿಕ್ಸ್) ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್(7), ರೋವ್ಮನ್ ಪೋವಲ್(2) ಬಂದಷ್ಟೇ ಬೇಗ ಪೆವಿಲಿಯನ್ ಸೇರಿದರು. ಉಳಿದಂತೆ ಅಕ್ಸರ್ ಪಟೇಲ್(17*), ಶಾರ್ದೂಲ್(3) ಹಾಗೂ ಕುಲ್ದೀಪ್ ಯಾದವ್(3*) ಅಲ್ಪಮೊತ್ತದ ಕಾಣಿಕೆ ನೀಡಿದರು.

ಲಿವಿಂಗ್‌ಸ್ಟೋನ್ ಸ್ಪಿನ್ ಮೋಡಿ
ಪಂಜಾಬ್ ಕಿಂಗ್ಸ್ ಪರ ಲಿಯಮ್ ಲಿವಿಂಗ್‌ಸ್ಟೋನ್(3/27) ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ತಂಡಕ್ಕೆ ಮುನ್ನಡೆ ತಂದುಕೊಟ್ಟ ಲಿವಿಂಗ್‌ಸ್ಟೋನ್, ನಿರ್ಣಾಯಕ ಹಂತದಲ್ಲಿ ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಅರ್ಶದೀಪ್ ಸಿಂಗ್(3/38), ಕಗೀಸೋ ರಬಾಡ(1/24) ಉತ್ತಮ ಸಾಥ್ ನೀಡಿದರು.
ಪಂಜಾಬ್ ಬ್ಯಾಟಿಂಗ್ ವೈಫಲ್ಯ:
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 160 ರನ್‌ಗಳ ಟಾರ್ಗೆಟ್ ಎದುರಿಸಿದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಜಾನಿ ಬೈರ್ಸ್ಟೋವ್(28) ಹಾಗೂ ಶಿಖರ್ ಧವನ್(19) ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾದರು. ನಂತರದ ಬಂದ ರಾಜಪಕ್ಸ(4), ಲಿವಿಂಗ್‌ಸ್ಟೋನ್(3) ಹಾಗೂ ನಾಯಕ ಮಯಾಂಕ್ ಅಗರ್ವಾಲ್(0) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಮಧ್ಯಮ ಕ್ರಮಾಂಕದಲ್ಲಿ ಹರ್ಪ್ರೀತ್ ಬ್ರಾರ್(1), ರಿಶಿ ಧವನ್(4), ರಬಾಡ(6) ಸಹ ಬ್ಯಾಟಿಂಗ್ ವೈಫಲ್ಯ ಎದುರಿಸಿದರು.

ಜಿತೇಶ್ ವ್ಯರ್ಥ್ಯ ಹೋರಾಟ:
ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಬಂದ ಜಿತೇಶ್ ಶರ್ಮ 44(34) ಏಕಾಂಗಿ ಹೋರಾಟ ನಡೆಸಿದರು. ಬಿರುಸಿನ ಆಟವಾಡಿದ ಜಿತೇಶ್ ಶರ್ಮ, ಕೊನೆ ಹಂತದವರೆಗೂ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು ಪ್ರಯೋಜನವಾಗಲಿಲ್ಲ. ಇವರಿಗೆ ಉತ್ತಮ ಸಾಥ್ ನೀಡಿದ ರಾಹುಲ್ ಚಹರ್(25*) ಜವಾಬ್ದಾರಿಯ ಆಟವಾಡಿದರು ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಶಾರ್ದೂಲ್ ಮಿಂಚಿನ ದಾಳಿ:
ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಆಟವಾಡುವಲ್ಲಿ ವಿಫಲವಾದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬೌಲರ್‌ಗಳು ಆಸರೆಯಾದರು. ಪ್ರಮುಖವಾಗಿ ಶಾರ್ದೂಲ್ ಥಾಕೂರ್(4/36) ತಮ್ಮ ಪರಿಣಾಮಕಾರಿ ಬೌಲಿಂಗ್‌ನಿಂದ ಪಂಜಾಬ್ ಆಟಗಾರರಿಗೆ ಕಡಿವಾಣ ಹಾಕಿದರು. ತಮ್ಮ ಮೊದಲ ಓವರ್‌ನಲ್ಲೇ ಶಿಖರ್ ಧವನ್, ರಾಜಪಕ್ಸೆ ವಿಕೆಟ್ ಕಬಳಿಸಿದ ಥಾಕೂರ್, ನಿರ್ಣಾಯಕ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಜಿತೇಶ್ ಶರ್ಮ, ರಬಾಡ ವಿಕೆಟ್ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇವರಿಗೆ ಉತ್ತಮ ಸಾಥ್ ನೀಡಿದ ಕುಲ್ದೀಪ್ ಯಾದವ್ ಹಾಗೂ ಅಕ್ಸರ್ ಪಟೇಲ್ ತಲಾ 2 ಹಾಗೂ ನೋಕಿಯೇ 1 ವಿಕೆಟ್ ಪಡೆದರು.

4ನೇ ಸ್ಥಾನಕ್ಕೇರಿದ ಡೆಲ್ಲಿ:
ಪ್ಲೇ-ಆಫ್ ಹಂತಕ್ಕೇರಲು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಡೆಲ್ಲಿ ಈ ಗೆಲುವಿನಿಂದ ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನಕ್ಕೇರಿದೆ. ಆ ಮೂಲಕ ಪ್ಲೇ-ಆಫ್ ಹೊಸ್ತಿಲಿಗೆ ಬಂದು ನಿಂತಿರುವ ಡೆಲ್ಲಿ, ತನ್ನ ಕಡೆಯ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್ ಪ್ರವೇಶಿಸುವ ಕನಸು ನನಸಾಗುವ ಸಾಧ್ಯತೆ ಇದೆ.