ಆರಂಭಿಕರಾದ ಋತುರಾಜ್ ಗಾಯಕ್ವಾಡ್(99) ಹಾಗೂ ಡ್ವೇನ್ ಕಾನ್ವೆ(85*) ಅವರ ದಾಖಲೆಯ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ 13 ರನ್ಗಳ ಗೆಲುವು ಸಾಧಿಸಿದೆ.
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಸಿಎಸ್ಕೆ ಮೊದಲ ಬ್ಯಾಟಿಂಗ್ ಅವಕಾಶ ಪಡೆಯಿತು. ಆರಂಭಿಕರಿಂದ ದೊರೆತ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್, 20 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 202 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ ಹೈದ್ರಾಬಾದ್, 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ಗಳಿಸುವ ಮೂಲಕ 13 ರನ್ಗಳ ಸೋಲೊಪ್ಪಿಕೊಂಡಿತು.
ಪೂರನ್ ವ್ಯರ್ಥ ಹೋರಾಟ:
ಸಿಎಸ್ಕೆ ನೀಡಿದ 202 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಸನ್ರೈಸರ್ಸ್ಗೆ ಆರಂಭಿಕರಾದ ಅಭಿಷೇಕ್ ಶರ್ಮ(39) ಹಾಗೂ ನಾಯಕ ಕೇನ್ ವಿಲಿಯಂಸನ್(47) ಮೊದಲ ವಿಕೆಟ್ಗೆ 58 ರನ್ಗಳ ಅಡಿಪಾಯ ಹಾಕಿಕೊಟ್ಟರು. ನಂತರ ಬಂದ ರಾಹುಲ್ ತ್ರಿಪಾಠಿ(0), ಐಡೆನ್ ಮಾರ್ಕ್ರಂ(17) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ 64* ರನ್(33 ಬಾಲ್, 3 ಬೌಂಡರಿ, 6 ಸಿಕ್ಸ್) ಸ್ಪೋಟಕ ಆಟವಾಡಿದರು. ಸಿಎಸ್ಕೆ ಬೌಲಿಂಗ್ ದಾಳಿಯನ್ನ ಮನಬಂದಂತೆ ದಂಡಿಸಿದ ಪೂರನ್, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್ ಸಿಂಗ್(15) ಹಾಗೂ ವಾಷಿಂಗ್ಟನ್ ಸುಂದರ್(2) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ ಹೈದ್ರಾಬಾದ್ 189 ರನ್ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.
ಚೆನ್ನೈ ಪರ ಮುಖೇಶ್ ಚೌಧರಿ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ದುಬಾರಿ ಬೌಲಿಂಗ್ ನಡುವೆಯೂ ಸನ್ರೈಸರ್ಸ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದ ಚೌಧರಿ, 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಸ್ಯಾಂಟ್ನರ್ ಹಾಗೂ ಪ್ರಿಟೋರಿಯಸ್ ತಲಾ 1 ವಿಕೆಟ್ ಪಡೆದರು. ಪ್ರಸಕ್ತ ಸೀಸನ್ನಲ್ಲಿ ಸಾಕಷ್ಟು ಕ್ಯಾಚ್ಗಳನ್ನ ಕೈಚಲ್ಲಿರುವ ಸಿಎಸ್ಕೆ, ಹೈದ್ರಾಬಾದ್ ವಿರುದ್ಧವೂ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿತು.
ಋತುರಾಜ್-ಕಾನ್ವೇ ಅಬ್ಬರ:
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ 99 ರನ್(57 ಬಾಲ್, 6 ಬೌಂಡರಿ, 6 ಸಿಕ್ಸ್) ಹಾಗೂ ಡ್ವೇನ್ ಕಾನ್ವೆ 85* ರನ್(55 ಬಾಲ್, 8 ಬೌಂಡರಿ, 4 ಸಿಕ್ಸ್) ಅದ್ಭುತ ಆಟವಾಡಿದರು. ಸನ್ರೈಸರ್ಸ್ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಈ ಜೋಡಿ, ಮೊದಲ ವಿಕೆಟ್ಗೆ ದಾಖಲೆಯ 182 ರನ್ ಕಲೆಹಾಕುವ ಮೂಲಕ ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆದರೆ ಸ್ಪೋಟಕ ಆಟವಾಡಿದ ಋತುರಾಜ್ ಗಾಯಕ್ವಾಡ್ 99 ರನ್ಗಳಿಸಿ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು. ನಂತರ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಮೊದಲ ಕ್ರಮಾಂಕದಲ್ಲಿ ಬಂದ ನಾಯಕ ಎಂ.ಎಸ್.ಧೋನಿ(8) ಹಾಗೂ ರವೀಂದ್ರ ಜಡೇಜಾ(1*) ಸ್ಪೋಟಕ ಆಟವಾಡಲಿಲ್ಲ. ಹೈದ್ರಾಬಾದ್ ಪರ ಟಿ. ನಟರಾಜನ್ (2/42) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ತನ್ನ ಮೂರನೇ ಗೆಲುವು ಸಾಧಿಸಿದರೆ. ಸನ್ರೈಸರ್ಸ್ ಹೈದ್ರಾಬಾದ್ 4ನೇ ಸೋಲಿನ ಆಘಾತ ಅನುಭವಿಸಿತು. ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ ಸಿಎಸ್ಕೆ 9ನೇ ಸ್ಥಾನದಲ್ಲಿದ್ದರೆ, ಎಸ್ಆರ್ಎಚ್ 4ನೇ ಸ್ಥಾನದಲ್ಲಿದೆ.