IPL 2022- CSK – MSDhoni Vs Ravindra Jadeja – ಸಿಎಸ್ ಕೆ ತಂಡದ ನಾಯಕ ಯಾರು..? ಪಾತ್ರಧಾರಿ ಜಡ್ಡು -ಸೂತ್ರ ಧಾರಿ ಧೋನಿ-

15ನೇ ಆವೃತ್ತಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರಿಸ್ಥಿತಿ ಸದ್ಯಕ್ಕೆ ಚಿಂತೆ ಮಾಡುವಂತಿದೆ. ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ಆಘಾತದ ಮೇಲೆ ಆಘಾತ ಅನುಭವಿಸಿದೆ.
ಮುಖ್ಯವಾಗಿ ಸಿಎಸ್ ಕೆ ತಂಡ ಅಂದುಕೊಂಡಂತೆ ನಡೆಯುತ್ತಿಲ್ಲ. ತಂಡದಿಂದ ಸಾಂಘಿಕ ಆಟ ಹೊರಬರುತ್ತಿಲ್ಲ. ಬ್ಯಾಟ್ಸ್ ಮೆನ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ರೂ ಬೌಲಿಂಗ್ ವಿಭಾಗದಲ್ಲಿ ವೀಕ್ ಆಗಿದೆ. ದೀಪಕ್ ಚಾಹರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ಇನ್ನೊಂದೆಡೆ ತಂಡದ ನಾಯಕತ್ವದ ವಿಚಾರದಲ್ಲೂ ಗೊಂದಲ ಇದೆ. ಟೂರ್ನಿ ಆರಂಭವಾಗುವುದಕ್ಕಿಂತ ಮುನ್ನ ಎರಡು ದಿನ ಬಾಕಿ ಇರುವಾಗಲೇ ಧೋನಿ ನಾಯಕತ್ವವನ್ನು ತ್ಯಜಿಸಿದ್ದರು. ರವೀಂದ್ರ ಜಡೇಜಾಗೆ ನಾಯಕತ್ವದ ಪಟ್ಟವನ್ನು ನೀಡಲಾಯ್ತು.
ರವೀಂದ್ರ ಜಡೇಜಾ ಅವರಿಗೆ ಸಡನ್ ಆಗಿ ನಾಯಕತ್ವ ಜವಾಬ್ದಾರಿ ನೀಡಿರುವುದು ಒಂದು ರೀತಿಯಲ್ಲಿ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಯಾಕಂದ್ರೆ ರವೀಂದ್ರ ಜಡೇಜಾಗೆ ಈ ಹಿಂದೆ ಮುನ್ನಡೆಸಿದ್ದ ಅನುಭವ ಕೂಡ ಇಲ್ಲ. ಹೀಗಾಗಿ ರವೀಂದ್ರ ಜಡೇಜಾ ನಾಯಕತ್ವದ ಒತ್ತಡಕ್ಕೆ ಸಿಲುಕಿದ್ದಾರೆ ಎಂಬುದು ಅವರ ಹಾವಭಾವಗಳನ್ನು ನೋಡಿದಾಗ ಗೊತ್ತಾಗುತ್ತದೆ.
ಈ ಮಧ್ಯೆ, ಧೋನಿ ತಂಡದ ಮಾಜಿ ನಾಯಕನಾಗಿದ್ರೂ ಮೈದಾನದಲ್ಲಿ ಎಲ್ಲಾ ನಿರ್ಧಾರಗಳನ್ನು ಧೋನಿಯೇ ತೆಗೆದುಕೊಳ್ಳುತ್ತಿದ್ದಾರೆ. ಪಂದ್ಯಕ್ಕೆ ಮುನ್ನ ನಡೆಯುವ ಟೀಮ್ ಮೀಟಿಂಗ್ ನಲ್ಲೂ ಧೋನಿಯೇ ಸಹ ಆಟಗಾರರ ಜೊತೆ ಮಾತನಾಡುತ್ತಿರುತ್ತಾರೆ. ಇನ್ನು ಮೈದಾನದೊಳಗೆ ಎಲ್ಲಾ ನಿರ್ಧಾರಗಳನ್ನು ಕೂಡ ಧೋನಿಯೇ ತೆಗೆದುಕೊಳ್ಳುತ್ತಾರೆ. ರವೀಂದ್ರ ಜಡೇಜಾ ಹೆಸರಿಗೆ ಮಾತ್ರ ನಾಯಕನಾಗಿ ಕಾಣುತ್ತಿದ್ದಾರೆ.

ಹಾಗಂತ ಧೋನಿ ಮಾಡುತ್ತಿರುವುದು ತಪ್ಪು ಅಂತಲ್ಲ. ಹಿರಿಯ ಆಟಗಾರನಾಗಿ, ಮಾಜಿ ಆಟಗಾರನಾಗಿ ಧೋನಿ ಮಾಡುತ್ತಿರುವುದು ತಂಡಕ್ಕೋಸ್ಕರ. ಆದ್ರೆ ನಾಯಕನಾಗಿ ರವೀಂದ್ರ ಜಡೇಜಾ ಇದರಿಂದ ಕಲಿಯುವುದಾದ್ರೂ ಏನು ಎಂಬ ಪ್ರಶ್ನೆ ಎದುರಾಗುತ್ತಿದೆ.
ರವೀಂದ್ರ ಜಡೇಜಾಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಆದ್ರೆ ಧೋನಿ ಇರುವುದರಿಂದ ನಾಯಕನ ಅಧಿಕಾರವನ್ನು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಂಡ ಎಲ್ಲಿ ಎಡವುತ್ತಿದೆ ಎಂಬುದನ್ನು ಅರಿತುಕೊಳ್ಳಲು ಕೂಡ ಜಡೇಜಾಗೆ ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಮಾಜಿ ಕ್ರಿಕೆಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಜೇಯ್ ಜಡೇಜಾ ಮತ್ತು ಪಾರ್ಥಿವ್ ಪಟೇಲ್ ಅವರು ಧೋನಿಯ ಪ್ರಭಾವಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಎಸ್ ಕೆ ತಂಡ ಭವಿಷ್ಯದ ಹಿತ ದೃಷ್ಟಿಯಿಂದ ಧೋನಿ ನಾಯಕತ್ವವನ್ನು ತ್ಯಜಿಸಿದ್ದಾರೆ. ಅಂದ ಮೇಲೆ ಹೊಸ ನಾಯಕನ ಮೇಲೆ ಸಂಪೂರ್ಣವಾಗಿ ವಿಶ್ವಾಸವನ್ನಿಡಬೇಕಿದೆ. ಆದ್ರೆ ಸಿಎಸ್ ಕೆ ತಂಡದಲ್ಲಿ ಧೋನಿ ಹಸ್ತಕ್ಷೇಪದಿಂದ ನಾಯಕ ರವೀಂದ್ರ ಜಡೇಜಾ ಅವರ ಆತ್ಮವಿಶ್ವಾಸವನ್ನು ಕುಗ್ಗುವಂತೆ ಮಾಡುತ್ತಿದೆ. IPL 2022- CSK – MSDhoni Vs Ravindra Jadeja -Experts slam CSK’s leadership

ಒಟ್ಟಿನಲ್ಲಿ ಸಿಎಸ್ ಕೆ ತಂಡದಲ್ಲಿ ರವೀಂದ್ರ ಜಡೇಜಾ ಪಾತ್ರದಾರಿಯಾಗಿದ್ದಾರೆ. ಧೋನಿ ಸೂತ್ರಧಾರಿಯಾಗಿದ್ದಾರೆ. ಪರಿಣಾಮ ರವೀಂದ್ರ ಜಡೇಜಾ ಡಮ್ಮಿ ಕ್ಯಾಪ್ಟನ್ ಆಗಿ ಕಾಣುತ್ತಾರೆ.
ಏನೇ ಆಗ್ಲಿ, ಚೆನ್ನೈ ತಂಡದಲ್ಲಿ ಧೋನಿ ಆಡುತ್ತಿರುವ ತನಕ ಧೋನಿಯೇ ಲೀಡರ್.. ಧೋನಿಯೇ ನಾಯಕ. ಎಲ್ಲವೂ ಕೂಲ್ ಕ್ಯಾಪ್ಟನ್ ಮಹಿಮೆ. ಅಂದ ಮೇಲೆ ನಾಯಕ ರವೀಂದ್ರ ಜಡೇಜಾಗೆ ಹೆಚ್ಚು ಟೆನ್ಷನ್ ಇಲ್ಲ. ಇದು ತಂಡ ಗೆಲುವು ದಾಖಲಿಸುತ್ತಾ ಹೋದ್ರೆ ಚಿಂತೆನೂ ಇಲ್ಲ. ಸಾಲು ಸಾಲು ಸೋಲುಗಳನ್ನು ಕಂಡಾಗ ತಲೆದಂಡವಾಗುವುದು ರವೀಂದ್ರ ಜಡೇಜಾ.. ಬದಲಾಗಿ ಧೋನಿಯಲ್ಲ.