ipl 2022 – Ayush Badoni -LSG – ಯಾರಿದು ಆಯೂಷ್ ಬಡೋನಿ..! ನೋವು.. ನಿರಾಸೆಯಲ್ಲೇ ಅರಳಿದ ಪ್ರತಿಭೆ..!

ಆಯುಷ್ ಬಡೋನಿ..!
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬೆಳಕಿಗೆ ಬಂದ ಯುವ ಆಟಗಾರ. 22ರ ಹರೆಯದ ಆಯುಷ್ ಬಡೋನಿ ಅವರು ದೆಹಲಿಯ ಕ್ರಿಕೆಟಿಗ. ಆದ್ರೆ ಐಪಿಎಲ್ ನಲ್ಲಿ ಆಡುತ್ತಿರುವುದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ
ಆಡಿದ್ದು ಕೇವಲ ಎರಡು ಐಪಿಎಲ್ ಪಂದ್ಯಗಳನ್ನು ಮಾತ್ರ. ಆದ್ರೆ ಸದ್ದು ಮಾಡುತ್ತಿರುವ ರೀತಿಯನ್ನು ನೋಡಿದ್ರೆ ಮುಂದೊಂದು ದಿನ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಖಚಿತ ಅಂತ ಗರ್ವದಿಂದಲೇ ಹೇಳಬಹುದು. ಅಷ್ಟರ ಮಟ್ಟಿಗೆ ಆಯುಷ್ ಬಡೋನಿ ತನ್ನ ಬ್ಯಾಟಿಂಗ್ ವೈಖರಿಯಿಂದ ಗಮನ ಸೆಳೆದಿದ್ದಾರೆ.
ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ ಅರ್ಧಶತಕ ದಾಖಲಿಸಿದ್ದ ಆಯೂಷ್ ಬಡೋನಿಗೆ ಜ್ಯೂನಿಯರ್ ಎಬಿಡಿ ಎಂಬ ಹೆಸರು ಕೂಡ ಒಲಿದು ಬಂದಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅವರು ಆಯುಷ್ ಬಡೋನಿ ಬ್ಯಾಟಿಂಗ್ ಗೆ ಫಿದಾ ಆಗಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ಗೆ ಬಡೋನಿ ಆಸ್ತಿ ಅಂತನೂ ಹೇಳಿದ್ದಾರೆ. 360 ಡಿಗ್ರಿಯಲ್ಲಿ ಮಾಡುವ ಬಡೋನಿ ಅವರನ್ನು ಜ್ಯೂನಿಯರ್ ಎಬಿಡಿ ಅಂತ ಹೇಳಿದ್ದಾರೆ.
ಹಾಗೇ ನೋಡಿದ್ರೆ, ಬಡೋನಿ ಅವರ ಕ್ರಿಕೆಟ್ ಬದುಕಿಗೆ ದೆಹಲಿ ಕ್ರಿಕೆಟ್ ಸಂಸ್ಥೆಯು ಸರಿಯಾದ ಪ್ರೋತ್ಸಾಹ ನೀಡಲಿಲ್ಲ. ಆಯುಷ್ ಬಡೋನಿ ಅವರನ್ನು ಕಡೆಗಣಿಸಿರುವ ದೆಹಲಿ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಈಗ ಪೇಚಿಗೆ ಸಿಲುಕಿದೆ.

ಅಂದ ಹಾಗೇ ಆಯುಷ್ ಬಡೋನಿ ಅವರಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರ ಬೆಂಬಲವಿದೆ. ಬಡೋನಿ ಅವರ ಬ್ಯಾಟಿಂಗ್ ಪ್ರತಿಭೆಯನ್ನು ಗಮನಿಸಿರುವ ಗೌತಮ್ ಗಂಭೀರ್ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಮತ್ತೊಂದೆಡೆ ನಾಯಕ ಕೆ.ಎಲ್. ರಾಹುಲ್ ಕೂಡ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಆಯುಷ್ ಬಡೋನಿ ತನ್ನ ನೈಜ ಆಟವನ್ನಾಡುವ ಮೂಲಕ ಮಿಂಚು ಹರಿಸುತ್ತಿದ್ದಾರೆ.
ಗೌತಮ್ ಭಾಯ್ ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ನೈಜ ಆಟವನ್ನಾಡು. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡವಾಡಲು ಹಿರಿಯ ಆಟಗಾರರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ನಿನ್ನ ಆಟ ನೀನು ಆಡಬೇಕು ಎಂದು ಸಲಹೆಗಳನ್ನು ನೀಡುತ್ತಾ ಇರುತ್ತಾರೆ ಎಂದು ಆಯುಷ್ ಬಡೋನಿ ಹೇಳ್ತಾರೆ. ipl 2022 – Ayush Badoni -LSG – IPL 2022 New Star: Ayush Badoni

ಇನ್ನೊಂದೆಡೆ ಆಯುಷ್ ಬಡೋನಿ ಅವರ ಪ್ರತಿಭೆ ಕಮರಿ ಹೋಗುತ್ತಿತ್ತು. ಒಂದು ಕಡೆ ದೆಹಲಿ ಕ್ರಿಕೆಟ್ ಸಂಸ್ಥೆಯ ಕಡೆಗಣನೆ.. ಇನ್ನೊಂದು ಮೂರು ಬಾರಿ ಐಪಿಎಲ್ ನಲ್ಲಿ ಆನ್ ಸೋಲ್ಡ್ ಆಗಿದ್ದ ಬೇಸರ. ಇನ್ನೇನೂ ತನ್ನ ಕ್ರಿಕೆಟ್ ಬದುಕು ಮುಗಿದು ಹೋಯ್ತು ಅನ್ನುವಷ್ಟರಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡ್ರು. ಅದು ಕೂಡ ಕೇವಲ 20 ಲಕ್ಷ ರೂಪಾಯಿಗೆ. ಆದ್ರೆ ಆಯುಷ್ ಬಡೋನಿ ಸಿಕ್ಕ ಅವಕಾಶವನ್ನು ಈಗ ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. 20 ಲಕ್ಷ ರೂಪಾಯಿಯ ಆಟಗಾರ ತಂಡದ ಪಾಲಿಗೆ ಕೋಟಿ ಲೆಕ್ಕದ ಆಟಗಾರನಾಗಿ ಬೆಳೆಯುತ್ತಿದ್ದಾರೆ.
ಪ್ರತಿ ಎಸೆತವನ್ನು ಕ್ಷಣ ಮಾತ್ರದಲ್ಲಿ ಅರಿತುಕೊಂಡು ಬ್ಯಾಟಿಂಗ್ ಮಾಡುವ ಚಾಣಕ್ಷತನ ಆಯೂಷ್ ಬಡೋನಿ ಅವರಲ್ಲಿದೆ. ಅಷ್ಟೇ 360 ಡಿಗ್ರಿಯಲ್ಲೂ ಬ್ಯಾಟಿಂಗ್ ಮಾಡುವ ನೈಪುಣ್ಯತೆಯನ್ನು ಕೂಡ ಬೆಳೆಸಿಕೊಂಡಿದ್ದಾರೆ. ಒತ್ತಡದ ಸಂದರ್ಭದಲ್ಲೂ ಬಿರುಸಿನ ಆಟವನ್ನಾಡುವ ತಾಕತ್ತು ಕೂಡ ಇದೆ. ಒಟ್ಟಿನಲ್ಲಿ ಸೆಹ್ವಾಗ್, ಗಂಭೀರ್, ವಿರಾಟ್ ಕೊಹ್ಲಿ, ಶಿಖರ್ ಧವನ್, ರಿಷಬ್ ಪಂತ್ ನಂತರ ದೆಹಲಿಯ ಸ್ಪೋಟಕ ಆಟಗಾರನಾಗಿ ಆಯೂಷ್ ಬಡೋನಿ ಹೊರಹೊಮ್ಮುತ್ತಿದ್ದಾರೆ.