ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದಲೇ ಮೋಡಿ ಮಾಡಿದ್ದ ಅಂಬಟಿ ರಾಯುಡು, ಐಪಿಎಲ್‌ನಿಂದ ದೂರು ಉಳಿಯುವ ಮನಸ್ಸು ಮಾಡಿದ್ದಾರೆ ಎಂಬ ಕುರಿತ ಗೊಂದಲ ಸಿಎಸ್‌ಕೆ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿದ್ದ ರಾಯುಡು, ಹಲವು ಮ್ಯಾಚ್ ವಿನ್ನಿಂಗ್ ಪ್ರದರ್ಶನದಿಂದ ಮೋಡಿ ಮಾಡಿದ್ದರು. ಆದರೆ ಐಪಿಎಲ್ ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿರುವ ರಾಯುಡು, ಪ್ರಸಕ್ತ ಟೂರ್ನಿಯ ಬಳಿಕ ಐಪಿಎಲ್‌ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ರಾಯುಡು ಘೋಷಿಸಿದ್ದಾರೆ. ಆದರೆ ಈ ಕುರಿತು ಶನಿವಾರ ಮಧ್ಯಾಹ್ನ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದ 36 ವರ್ಷದ ಅಂಬಟಿ ರಾಯುಡು, ನಂತರದಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಹೀಗಾಗಿ ರಾಯುಡು ಅವರ ಟ್ವೀಟ್ ಕುರಿತು ಸಿಎಸ್‌ಕೆ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.
ರಾಯುಡು ಟ್ವೀಟ್‌ನಲ್ಲಿ ಏನಿತ್ತು?
“ಬಹುಶಃ ಇದು ನನ್ನ ಕೊನೆಯ ಐಪಿಎಲ್ ಟೂರ್ನಿ ಎಂದು ತಿಳಿಸಲು ನಾನು ಹರ್ಷ ವ್ಯಕ್ತಪಡಿಸುತ್ತೇನೆ. 13 ವರ್ಷಗಳ ಕಾಲ ಎರಡು ಶ್ರೇಷ್ಠ ತಂಡಗಳಲ್ಲಿ ಆಡುವ ಮೂಲಕ ನಾನು ಅಮೂಲ್ಯ ಕ್ಷಣಗಳನ್ನು ಕಳೆದಿದ್ದೇನೆ. ನನ್ನ ಈ ಪಯಣಕ್ಕೆ ಅವಕಾಶ ನೀಡಿದ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ತಂಡಕ್ಕೆ ಕೃತಜ್ಞತೆ ತಿಳಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದರು. ಈ ವಿಷಯ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ರಾಯುಡು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ರಾಯುಡು ನಿವೃತ್ತಿ ಆಗುತ್ತಿಲ್ಲ:
ಅಂಬಟಿ ರಾಯುಡು ಐಪಿಎಲ್‌ನಿಂದ ನಿವೃತ್ತಿ ಆಗುತ್ತಿರುವ ವಿಷಯ ಎಲ್ಲೆಡೆ ಹರಿದಾಡುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಈ ವಿಷಯವನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ಅಂಬಟಿ ರಾಯುಡು ನಿವೃತ್ತಿ ಆಗುತ್ತಿಲ್ಲ. ತಮ್ಮ ಪ್ರದರ್ಶನದ ಬಗ್ಗೆ ಅಸಮಾಧಾನಗೊಂಡಿರುವ ಕಾರಣದಿಂದ ಅವರು ಈ ಫೋಸ್ಟ್ ಮಾಡಿದ್ದಾರೆ. ಹೀಗಾಗಿ ಈ ವಿಷಯವನ್ನು ನಾನು ತಳ್ಳಿಹಾಕುತ್ತಿದ್ದು, ಅವರು ನಮ್ಮೊಂದಿಗೆ ಇರುತ್ತಾರೆ” ಎಂದು ಸಿಎಸ್‌ಕೆ ತಂಡದ ಸಿಇಒ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಅಂಬಟಿ ರಾಯುಡು ಅವರು ಮಾಡಿದ ಒಂದು ಟ್ವೀಟ್, ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು. ಪ್ರಮುಖವಾಗಿ ಸಿಎಸ್‌ಕೆ ಅಭಿಮಾನಿಗಳಲ್ಲಿ ರಾಯುಡು ಅವರ ನಿವೃತ್ತಿ ವಿಷಯ ಸ್ವಲ್ಪಮಟ್ಟಿನ ಬೇಸರ ಮೂಡಿಸಿತ್ತು.
ಅಂಬಟಿ ರಾಯುಡು – IPLನಲ್ಲಿ:
ಸಿಎಸ್‌ಕೆ ತಂಡದ ಕಾಯಂ ಸದಸ್ಯನಾಗಿದ್ದ ಹೈದ್ರಾಬಾದ್ ಮೂಲದ ಅಂಬಟಿ ರಾಯುಡು, ತಮ್ಮ 13 ವರ್ಷಗಳ ಐಪಿಎಲ್ ಪಯಣದಲ್ಲಿ 187 ಪಂದ್ಯಗಳಿಂದ 4187 ರನ್‌ಗಳಿಸಿದ್ದು, ಆ ಮೂಲಕ ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳಿಸಿರುವ 12ನೇ ಆಟಗಾರ ಎನಿಸಿದ್ದಾರೆ. ಇನ್ನೂ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿರುವ 12 ಪಂದ್ಯಗಳಲ್ಲಿ 27.1ರ ಸರಾಸರಿಯಲ್ಲಿ 271 ರನ್‌ಗಳಿಸಿದ್ದಾರೆ.