IPL 2022 – ಐಪಿಎಲ್ ಟೂರ್ನಿ ಮಾರ್ಚ್ 27ಕ್ಕೆ ಆರಂಭ.. ಮೇ 28ಕ್ಕೆ ಫೈನಲ್..?

15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಹತ್ತು ಫ್ರಾಂಚೈಸಿಗಳು ಭರದ ಸಿದ್ದತೆ ನಡೆಸುತ್ತಿವೆ. ಈಗಾಗಲೇ ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿವೆ.
ಈ ನಡುವೆ, ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸಲು ಪ್ಲಾನ್ ಮಾಡಿಕೊಳ್ಳುತ್ತಿವೆ.
ಬಿಸಿಸಿಐ ಮೂಲಗಳ ಪ್ರಕಾರ ಐಪಿಎಲ್ ಟೂರ್ನಿ ಮಾರ್ಚ್ 27ರಿಂದ ಆರಂಭವಾಗಲಿದೆ. ಮೇ 28ರಂದು ಫೈನಲ್ ಪಂದ್ಯ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.
ಒಂದು ಮೂಲಗಳ ಪ್ರಕಾರ ಬಿಸಿಸಿಐ ಅಪೆಕ್ಸ್ ಕಮಿಟಿಯು ಈಗಾಗಲೇ ಆರು ತಾಣಗಳನ್ನು ಅಂತಿಮಗೊಳಿಸಿದೆಯಂತೆ. ಮಹಾರಾಷ್ಟ್ರದ ಐದು ಮೈದಾನದಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಹಾಗೇ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. IPL 2022: 15th season likely to be played at 6 venues from March 27 to May 28
ಮುಂಬೈನ ವಾಂಖೇಡೆ ಮೈದಾನ, ಬ್ರಬೊರ್ನ್ ಕ್ರೀಡಾಂಗಣ, ಡಾ. ಡಿ.ವೈ. ಪಾಟೀಲ್ ಮೈದಾನ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಮತ್ತು ಕೆಲವೊಂದು ಪಂದ್ಯಗಳನ್ನು ನವಿ ಮುಂಬೈನ ಜಿಯೋ ಅಂಗಣದಲ್ಲಿ ನಡೆಸುವ ಲೆಕ್ಕಚಾರದಲ್ಲಿದೆ ಬಿಸಿಸಿಐ. ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ.
ಈ ಬಾರಿಯ ಐಪಿಎಲ್ ಟೂರ್ನಿ ಕೂಡ ಕೋವಿಡ್ ಮಾರ್ಗಸೂಚಿಯಂತೆ ನಡೆಯಲಿದೆ. ಅದೇ ರೀತಿ ಪಂದ್ಯ ನೋಡಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಾ ಅನ್ನೋದನ್ನು ಬಿಸಿಸಿಐ ಇನ್ನೂ ನಿರ್ಧಾರ ಮಾಡಿಲ್ಲ. ಅಂದ ಹಾಗೇ ಈ ಬಾರಿಯ ಐಪಿಎಲ್ ಟೂರ್ನಿಗೆ ಟಾಟಾ ಕಂಪೆನಿಯು ಪ್ರಾಯೋಜಕತ್ವವನ್ನು ವಹಿಸಲಿದೆ.