ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ ಸಿಂಧು ಅವರು ನಿರಾಸೆ ಅನುಭವಿಸಿದ್ದಾರೆ.
ಬಾಲಿಯಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಸಿಂಧು ಅಕಾನೆ ಯಮಗುಚಿ ವಿರುದ್ಧ ಎರಡು ನೇರ ಸೆಟ್ ಗಳಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು. ಅಲ್ಲದೆ ಪ್ರಶಸ್ತಿ ಗೆಲ್ಲುವ ಆಸೆಯನ್ನು ಕೈ ಬಿಟ್ಟರು.
ಎರಡು ಒಲಿಂಪಿಕ್ಸ್ ವಿಜೇತೆ ಸಿಂಧು ಅವರು 21-13, 21-9 ರಿಂದ ಜಪಾನ್ ಅಕಾನೆ ವಿರುದ್ಧ ಸೋತರು. ಮೊದಲ ಗೇಮ್ ನಿಂದ ಸಿಂಧು ಅಂಕ ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು. ಆರಂಭದಲ್ಲಿ ಅಕಾನೆ ಅಂಕ ಬೇಟೆಯಲ್ಲಿ ಅಂತರವನ್ನು ಕಾಯ್ದುಕೊಂಡು ಮುನ್ನಡೆ ಸಾಧಿಸಿದರು. 11-7 ರಿಂದ ಮುಂದೆ ಸಾಗಿದ ಜಪಾನ್ ಆಟಗಾರ್ತಿ ನಿರಾಯಾಸವಾಗಿ ಗೇಮ್ ಗೆದ್ದರು.
ಎರಡನೇ ಗೇಮ್ ನಲ್ಲಿ ಸಿಂಧು ಮೈ ಚಳಿ ಬಿಟ್ಟು ಆಡುವ ಆಸೆಗೆ ಅಕಾನೆ ಪೆಟ್ಟು ನೀಡಿದರು. ಈ ಗೇಮ್ ನಲ್ಲಿ ಅಂಕಗಳನ್ನು ಸುಲಭವಾಗಿ ಬಾಚಿಕೊಳ್ಳುತ್ತಾ ಜಪಾನ್ ಆಟಗಾರ್ತಿ ಸುಲಭವಾಗಿ ಪಂದ್ಯ ಗೆದ್ದು ಫೈನಲ್ ಗೆ ಪ್ರವೇಶ ಪಡೆದರು.