ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಭಾನುವಾರ ಇತಿಹಾಸ ನಿರ್ಮಿಸಿದೆ. 14 ಬಾರಿ ಪ್ರಶಸ್ತಿ ಗೆದ್ದಿರುವ ಇಂಡೋನೇಷ್ಯಾವನ್ನು ಸೋಲಿಸಿದ ತಂಡವು 73 ವರ್ಷಗಳಲ್ಲಿ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದುಕೊಂಡಿದೆ. ಭಾರತವು ಇಂಡೋನೇಷ್ಯಾ ತಂಡವನ್ನು 3-0 ಅಂತರದಿಂದ ಸೋಲಿಸಿದೆ.
ಈ ಟೂರ್ನಿಯಲ್ಲಿ ಭಾರತ ಮೊದಲ ಬಾರಿಗೆ ಫೈನಲ್ ಅರ್ಹತೆ ಪಡೆದಿತ್ತು. ಐದು ಪಂದ್ಯಗಳ ಈ ಪ್ರಶಸ್ತಿ ಸಮರದಲ್ಲಿ ಭಾರತ ಸತತ ಮೂರು ಗೆಲುವು ಸಾಧಿಸಿದೆ. ಇವುಗಳಲ್ಲಿ ಎರಡು ಸಿಂಗಲ್ಸ್ ಮತ್ತು ಒಂದು ಡಬಲ್ಸ್ ಸೇರಿವೆ. ಈ ಗೆಲುವಿನ ನಂತರ ಕೇಂದ್ರ ಕ್ರೀಡಾ ಸಚಿವಾಲಯವು ಭಾರತ ತಂಡಕ್ಕೆ ಒಂದು ಕೋಟಿ ಬಹುಮಾನವನ್ನು ಘೋಷಿಸಿದೆ. ಒಲಿಂಪಿಕ್, ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳನ್ನು ಹೊರತುಪಡಿಸಿ ಯಾವುದೇ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗೆದ್ದವರಿಗೆ ಬಹುಮಾನವನ್ನು ಕ್ರೀಡಾ ಸಚಿವಾಲಯ ಘೋಷಿಸಿರುವುದು ಇದೇ ಮೊದಲು.
The Indian badminton team has scripted history! The entire nation is elated by India winning the Thomas Cup! Congratulations to our accomplished team and best wishes to them for their future endeavours. This win will motivate so many upcoming sportspersons.
— Narendra Modi (@narendramodi) May 15, 2022
ಗೆಲುವಿನ ಬಳಿಕ ಭಾರತ ತಂಡದ ಆಟಗಾರರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಐತಿಹಾಸಿಕ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಚ್ ಎಸ್ ಪ್ರಣಯ್ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ.

ಅನುಭವಿ ಕಿಂದಬಿ ಶ್ರೀಕಾಂತ್ ಭಾರತದ ಹಣೆಗೆ ಗೆಲುವಿನ ತಿಲಕವಿಟ್ಟರು. ವಿಶ್ವದ ನಂ-11 ಶ್ರೀಕಾಂತ್ ಅಂಗಳಕ್ಕೆ ಬಂದಾಗ ಮತ್ತೊಂದು ಸಿಂಗಲ್ಸ್ ಗೆಲ್ಲುವ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಆಗ ಭಾರತ 2-0 ಮುನ್ನಡೆಯಲ್ಲಿತ್ತು. ಬಲಗೈ ಶಟ್ಲರ್ 21-15, 23-21 ನೇರ ಗೇಮ್‌ಗಳಲ್ಲಿ ಉನ್ನತ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸಿದರು.

ಇದಕ್ಕೂ ಮುನ್ನ ನಡೆದ ಫೈನಲ್‌ನ ಎರಡನೇ ಪಂದ್ಯದಲ್ಲಿ ಸಿಂಗಲ್ಸ್ ಗೆದ್ದು ಡಬಲ್ಸ್‌ನಲ್ಲಿ ಜಯ ಸಾಧಿಸಿತ್ತು. ಭಾರತದ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮೊದಲ ಗೇಮ್‌ನಲ್ಲಿ ಸೋತರು, ನಂತರ ಎರಡು ಮತ್ತು ಮೂರನೇ ಗೇಮ್‌ಗಳನ್ನು ಗೆದ್ದು ಪಂದ್ಯವನ್ನು ಗೆದ್ದರು.
ಮೊದಲ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್ 8-21, 21-17, 21-16ರಲ್ಲಿ ಆಂಥೋನಿ ಸಿನಿಸುಕಾ ಗಿಂಟಿಂಗ್ ಅವರನ್ನು ಸೋಲಿಸಿದರು.
ಡಬಲ್ಸ್‌ನ ಮೊದಲ ಗೇಮ್‌ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸೋಲನುಭವಿಸಿದರು. ಇಂಡೋನೇಷ್ಯಾದ ಮೊಹಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರು 17 ನಿಮಿಷಗಳಲ್ಲಿ 21-18 ಗೇಮ್‌ಗಳಿಂದ ಗೆದ್ದರು.
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಎರಡನೇ ಗೇಮ್‌ನಲ್ಲಿ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಜೋಡಿಯನ್ನು 23-21 ರಿಂದ ಸೋಲಿಸಿದರು. ಇದಾದ ಬಳಿಕ ಮೂರನೇ ಗೇಮ್ ಅನ್ನು 21-19ರಲ್ಲಿ ಗೆದ್ದು ಪಂದ್ಯವನ್ನು ಗೆದ್ದುಕೊಂಡಿತು.
ಇಲ್ಲಿಯವರೆಗೆ, ಥಾಮಸ್ ಕಪ್ 32 ಬಾರಿ ಆಡಲಾಗಿದ್ದು, ಐದು ದೇಶಗಳು ಮಾತ್ರ ಗೆದ್ದಿವೆ. ಭಾರತ ಈ ಟೂರ್ನಿ ಗೆದ್ದ ಆರನೇ ರಾಷ್ಟ್ರ ಎನಿಸಿಕೊಂಡಿದೆ. ಥಾಮಸ್ ಕಪ್‌ನಲ್ಲಿ ಇಂಡೋನೇಷ್ಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಇದುವರೆಗೆ 14 ಇಂಡೋನೇಷ್ಯಾ ಈ ಪ್ರಶಸ್ತಿ ಗೆದ್ದಿದೆ. 1982ರಿಂದ ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಚೀನಾ ತಂಡ 10 ಹಾಗೂ ಮಲೇಷ್ಯಾ 5 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಜಪಾನ್ ಮತ್ತು ಡೆನ್ಮಾರ್ಕ್ ಎರಡೂ ತಲಾ ಒಂದು ಪ್ರಶಸ್ತಿಯನ್ನು ಹೊಂದಿವೆ.