ಕಾನ್ಪುರದ ಗ್ರೀನ್ಪಾರ್ಕ್ನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಗಳದ್ದೇ ಆಟ. ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳ ಹೋರಾಟವನ್ನು ಉಲ್ಟಾ ಮಾಡಿದ್ದು ಅಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್. ವಿಕೆಟ್ಗಾಗಿ ಪರದಾಡುತ್ತಿದ್ದ ಟೀಮ್ ಇಂಡಿಯಾಕ್ಕೆ ಮೇಲಿಂದ ಮೇಲೆ ವಿಕೆಟ್ ತಂದುಕೊಟ್ಟಿದ್ದು ಕೂಡ ಈ ಸ್ಪಿನ್ ಜೋಡಿ. ಕಾನ್ಪುರದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟ ಈ ಸ್ಪಿನ್ ಧ್ವಯರು ಈಗ ಗೆಲುವಿನ ಕನಸು ಹುಟ್ಟಿಹಾಕಿದ್ದಾರೆ.
ಟೀಮ್ ಇಂಡಿಯಾದ 349 ರನ್ಗಳ ಮೊದಲ ಇನ್ನಿಂಗ್ಸ್ ಆಟಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಮೊದಲ ವಿಕೆಟ್ಗೆ 151 ರನ್ಗಳ ಜೊತೆಯಾಟ ನೀಡಿತ್ತು. ವಿಕೆಟ್ ಇಲ್ಲದೆ ಟೀಮ್ ಇಂಡಿಯಾ ಪರದಾಡಿತ್ತು. ಆದರೆ ಅಶ್ವಿನ್ 89 ರನ್ಗಳಿಸಿದ್ದ ವಿಲ್ ಯಂಗ್ ರನ್ನು ಕೀಪರ್ ಭರತ್ಗೆ ಕ್ಯಾಚ್ ಕೊಡುವಂತೆ ಮಾಡಿದರು. ಇಲ್ಲಿಂದ ನ್ಯೂಜಿಲೆಂಡ್ ಆಟಕ್ಕೆ ಕಡಿವಾಣ ಬಿತ್ತು. ಅಶ್ವಿನ್ ಜೇಮಿಸನ್ ಮತ್ತು ಸೊಮರ್ವಿಲ್ಲೆ ವಿಕೆಟ್ ಕೂಡ ಪಡೆದುಕೊಂಡರು. 42.3 ಓವರ್ ಬೌಲಿಂಗ್ ಮಾಡಿದ್ ಅಶ್ವಿನ್ 82 ರನ್ ನೀಡಿ 3 ವಿಕೆಟ್ ಪಡೆದರು.
ಇನ್ನೊಂದು ಕಡೆ ಅಕ್ಸರ್ ಪಟೇಲ್ ಎಡಗೈ ಸ್ಪಿನ್ ಮೂಲಕ ಕಿವೀಸ್ ತಂಡವನ್ನು ಇನ್ನಿಲ್ಲದಂತೆ ಕಾಡಿದರು. ಅಕ್ಸರ್ ಮೊದಲು ರಾಸ್ ಟೇಲರ್ ವಿಕೆಟ್ ಹಾರಿಸಿದರೆ, ಮುಂದೆ ಹೆನ್ರಿ ನಿಕೊಲಸ್ ರನ್ನು ಕೂಡ ಎಲ್ ಬಿ ಬಲೆಗೆ ಕೆಡವಿದರು. ನೆಲಕಚ್ಚಿ ಆಡಿ 95 ರನ್ಗಳಿಸಿದ್ದ ಟಾಮ್ ಲೇಥಂ ಅಕ್ಸರ್ ಬೌಲಿಂಗ್ನಲ್ಲೇ ಸ್ಟಂಪ್ ಔಟ್ ಆದರು. ಟಾಮ್ ಬ್ಲಂಡಲ್ ಮತ್ತು ಟಿಮ್ ಸೌಥಿ ಅಕ್ಸರ್ ಬೌಲಿಂಗ್ ಮರ್ಮ ಅರಿಯದೆ ಕ್ಲೀನ್ ಬೌಲ್ಡ್ ಆದರು. ಅಕ್ಸರ್ 34 ಓವರ್ ಬೌಲಿಂಗ್ ಮಾಡಿ 62 ರನ್ ನೀಡಿ 5 ವಿಕೆಟ್ ಉರುಳಿಸಿದರು. ನ್ಯೂಜಿಲೆಂಡ್ ತನ್ನ ಕೊನೆಯ 9 ವಿಕೆಟ್ಗಳನ್ನು ಕೇವಲ 99 ರನ್ಗಳಿಗೆ ಕಳೆದುಕೊಂಡಿತು.
3 ವಿಕೆಟ್ ಪಡೆದ ಅಶ್ವಿನ್ ಈಗ ಟೆಸ್ಟ್ ಕ್ರಿಕೆಟ್ನಲ್ಲಿ 416 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಅನಿಲ್ ಕುಂಬ್ಳೆ 619, ಕಪಿಲ್ ದೇವ್ 434 ಹಾಗೂ ಹರ್ಭಜನ್ ಸಿಂಗ್ 417 ಟೆಸ್ಟ್ ವಿಕೆಟ್ ಪಡೆದಿದ್ದಾರೆ. 81ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್ ಹರ್ಭಜನ್ ದಾಖಲೆ ಮುರಿಯಲು ಇನ್ನೆರಡು ವಿಕೆಟ್ ಪಡೆಯಬೇಕಿದೆ. ಕಾನ್ಪುರ ಟೆಸ್ಟ್ ಪಂದ್ಯದಲ್ಲೇ ಈ ಸಾಧನೆ ಮಾಡುವ ನಿರೀಕ್ಷೆ ಇದೆ.