ಕಾನ್ಪುರದ ಗ್ರೀನ್ ಪಾರ್ಕ್ ಪಿಚ್ನಲ್ಲಿ ಹೇಳಿಕೊಳ್ಳುವಂತಹ ಸ್ಪಿನ್ ಇಲ್ಲ. ವೇಗದ ಬೌಲರ್ಗಳಿಗೆ ಸ್ವಿಂಗ್ ಕೂಡ ಇಲ್ಲ. ಹಾಗಂತ ಬ್ಯಾಟ್ಸ್ಮನ್ಗಳು ಸುಲಭವಾಗಿ ರನ್ಗಳಿಸ್ತಾರೆ ಅನ್ನುವ ಕನಸಿದ್ದರೂ ಅದು ಸತ್ಯವಲ್ಲ. ಯಾಕಂದರೆ ಅಷ್ಟರ ಮಟ್ಟಿಗೆ ಕಾನ್ಪುರದ ಪಿಚ್ ಸ್ಲೋ ಅಂಡ್ ಲೋ ಆಗಿದೆ. ನ್ಯೂಜಿಲೆಂಡ್ ನೀಡಿದ ಹೋರಾಟವನ್ನು 3ನೇ ದಿನ ಸಮರ್ಥವಾಗಿ ಹಿಮ್ಮೆಟ್ಟಿದ ಭಾರತ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನದಾಟದಲ್ಲಿ ಫಲಿತಾಂಶ ಯಾರ ಕಡೆ ವಾಲಬಹುದು ಅನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ.
3ನೇ ದಿನ ಆಟ ಆರಂಭಿಸಿದ ನ್ಯೂಜಿಲೆಂಡ್ ಟೀಮ್ ಇಂಡಿಯಾಕ್ಕೆ ಸವಾಲೊಡ್ಡಿತ್ತು. ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಕತ್ತು ನೋವಿನಿಂದಾಗಿ ಮೈದಾನಕ್ಕೆ ಇಳಿಯಲಿಲ್ಲ. ಇವರ ಬದಲು ಕೆ.ಎಸ್.ಭರತ್ ವಿಕೆಟ್ ಕೀಪಿಂಗ್ ಕೆಲಸ ಮಾಡಿದರು. ಟಾಮ್ ಲೇಥಂ ಮತ್ತು ವಿಲ್ ಯಂಗ್ ಟೀಮ್ ಇಂಡಿಯಾದ ಬೌಲರ್ಗಳು ಏನು ಮಾಡಿದರೂ ಔಟ್ ಆಗಲಿಲ್ಲ. ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೆ 151 ರನ್ಗಳಿಸಿ ಮುಗುಳ್ನಗುತ್ತಿತ್ತು. ವಿಲ್ ಯಂಗ್ 89 ರನ್ಗಳಿಸಿ ಶತಕದ ಕಡೆ ನೋಡುತ್ತಿದ್ದರು. ಈ ವೇಳೆ ಅಶ್ವಿನ್ ಮೊದಲ ಬ್ರೇಕ್ ತಂದುಕೊಟ್ಟರು. ಯಂಗ್ ವಿಕೆಟ್ ಕೀಪರ್ ಭರತ್ಗೆ ಕ್ಯಾಚ್ ನೀಡಿದ್ದರು.
ಟಾಮ್ ಲೇಥಂ ಮತ್ತು ಕೇನ್ ವಿಲಿಯಮ್ಸನ್ ಇನ್ನಿಂಗ್ಸ್ ಕಟ್ಟುವ ಯೋಚನೆ ಮಾಡಿದ್ದರು. ಆದರೆ ಲಂಚ್ ಬ್ರೇಕ್ಗೆ ಮುನ್ನ 18 ರನ್ಗಳಿಸಿದ್ದ ವಿಲಿಯಮ್ಸನ್ ಉಮೇಶ್ ಯಾದವ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಲಂಚ್ ಬಳಿಕದ ಸೆಷನ್ನಲ್ಲಿ ಟೀಮ್ ಇಂಡಿಯಾ ವಿಕೆಟ್ ಮೇಲೆ ವಿಕೆಟ್ ಪಡೆಯಿತು. ಅಕ್ಸರ್ ಪಟೇಲ್ ಡೇಂಜರಸ್ ರಾಸ್ ಟೇಲರ್ ಮತ್ತು ಹೆನ್ರಿ ನಿಕೊಲಸ್ ಆಟಕ್ಕೆ ಬೇಗನೆ ಕಡಿವಾಣ ಹಾಕಿದರು. 95 ರನ್ಗಳಿಸಿ ನೆಲಕಚ್ಚಿ ಆಡುತ್ತಿದ್ದ ಟಾಮ್ ಲೇಥಂ ಅಕ್ಸರ್ ಪಟೇಲ್ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋಗಿ ಎಡವಿ ಸ್ಟಂಪ್ ಔಟ್ ಆದರು. ರಚಿನ್ ರವೀಂದ್ರ ಜಡೇಜಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ದಿನದ 3ನೇ ಸೆಷನ್ನಲ್ಲಿ ಟಾಮ್ ಬ್ಲಂಡಲ್ ಮತ್ತು ಟಿಮ್ ಸೌಥಿ ಅಕ್ಸರ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಅಕ್ಸರ್ 4 ಟೆಸ್ಟ್ ಪಂದ್ಯಗಳಲ್ಲಿ ಈವರೆಗೆ 5 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. ಜೇಮಿಸನ್ ಮತ್ತು ಸೊಮರ್ವಿಲ್ಲೆ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ 296 ರನ್ಗಳಿಗೆ ಆಲೌಟ್ ಆಯಿತು. ಅಕ್ಸರ್ 5 ಮತ್ತು ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು.
49 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಟೀಮ್ ಇಂಡಿಯಾ 2ನೇ ಇನ್ನಿಂಗ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಕೈಲ್ ಜೇಮಿಸನ್ 1 ರನ್ಗಳಿಸಿದ್ದ ಶುಭ್ಮನ್ ಗಿಲ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 1 ವಿಕೆಟ್ ಕಳೆದುಕೊಂಡು 14 ರನ್ಗಳಿಸಿ 63 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಪೂಜಾರಾ ಅಜೇಯ 9 ಹಾಗೂ ಅಗರ್ವಾಲ್ ಅಜೇಯ 4 ರನ್ಗಳಿಸಿ 4ನೆ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.