ಮುಂದಿನ ತಿಂಗಳು ನಡೆಯಲಿರುವ ಬಾಂಗ್ಲಾದೇಶ(Bangladesh) ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ(Team India)ದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jedeja) ಸಂಪೂರ್ಣ ಫಿಟ್‌ನೆಸ್ ಪಡೆಯುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ ಹಾಗೂ ಬಾಂಗ್ಲಾದೇಶ ನಡುವೆ ಡಿಸೆಂಬರ್ 14ರಿಂದ ಚಿತ್ತಗಾಂಗ್‌ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ. ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಮೂವರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಆಫ್-ಸ್ಪಿನ್ನರ್ ಆರ್. ಅಶ್ವಿನ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ತಂಡಕ್ಕೆ ಆಯ್ಕೆಯಾಗಿದ್ದು, ತಂಡದ ನಾಲ್ಕನೇ ಸ್ಪಿನ್ನರ್ ಆಯ್ಕೆ ಕುರಿತು ಸಾಕಷ್ಟು ಚರ್ಚೆ ಆರಂಭವಾಗಿದೆ.
ಆಲ್ರೌಂಡರ್ ರವೀಂದ್ರ ಜಡೇಜಾ 2021ರಲ್ಲಿ ಯುಎಇಯಲ್ಲಿ ನಡೆದ ಏಷ್ಯಾಕಪ್ ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದಾಗಿ ಬಹುದಿನಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಈ ನಡುವೆ ಸ್ಟಾರ್ ಆಲ್ರೌಂಡರ್ ಜಡೇಜಾ ಹಲವು ಸಂದರ್ಭಗಳಲ್ಲಿ ಫಿಟ್ನೆಸ್ ತಪಾಸಣೆ ಮತ್ತು ಪುನರ್ವಸತಿಗಾಗಿ NCAಗೆ ಹೋಗಿದ್ದಾರೆ. ಆದರೆ, ಸದ್ಯದ ಪ್ರಕಾರ, ಅವರು ಬಾಂಗ್ಲಾದೇಶ ಸರಣಿಗೆ ಫಿಟ್ ಆಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಟೆಸ್ಟ್ ಸರಣಿಗೆ ಆಲ್ರೌಂಡರ್ ರವೀಂದ್ರ ಜಡೇಜಾ ಆಯ್ಕೆಯಾಗದೆ ಇದ್ದಲ್ಲಿ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಹುಡುಕಲಾಗುತ್ತಿದ್ದು, ಭಾರತ ಎ ತಂಡದ ಬೌಲರ್ ಸೌರಭ್ ಕುಮಾರ್ ಅವರನ್ನ ಹೆಸರಿಸಲಾಗಿದೆ. ಆದರೆ ಹೊಸ ಆಯ್ಕೆ ಸಮಿತಿ ರಚಿಸದಿದ್ದರೆ ಪ್ರಸಕ್ತ ಭರ್ಜರಿ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಅವರನ್ನ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಭಾರತ ತಂಡ ನಾಯಕ ರೋಹಿತ್ ಶರ್ಮ ನೇತೃತ್ವದಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ODI ಪಂದ್ಯಗಳನ್ನು ಆಡಲಿದೆ. ಉಭಯ ತಂಡಗಳ ನಡುವೆ ಡಿ.4ರಿಂದ ಮೂರು ಪಂದ್ಯಗಳ ODI ಸರಣಿ ಆರಂಭವಾಗಲಿದ್ದು, ಡಿಸೆಂಬರ್ 14-18ರವರೆಗೆ ಚಿತ್ತಗಾಂಗ್‌ನಲ್ಲಿ ಮತ್ತು ಡಿಸೆಂಬರ್ 22-26 ರಂದು ಮಿರ್‌ಪುರದಲ್ಲಿ ಆಡಲಿದೆ.