IPL 2022- RCB – Anuj Rawat – ಆರ್ ಸಿಬಿಯ ಸಿಡಿಲ ಮರಿ ಅನುಜ್ ರಾವತ್ – ಅಪ್ಪನ ಕನಸು ನನಸು ಮಾಡಿದ ಮಗ..!
![IPL 2022- RCB - Anuj Rawat - ಆರ್ ಸಿಬಿಯ ಸಿಡಿಲ ಮರಿ ಅನುಜ್ ರಾವತ್ - ಅಪ್ಪನ ಕನಸು ನನಸು ಮಾಡಿದ ಮಗ..! 3 anuj rawath rcb sports karnataka ipl 2022](http://sportskarnataka.com/wp-content/uploads/2022/03/anuj-rawath.jpg)
ಅನುಜ್ ರಾವತ್.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ. ಮುಂಬೈ ವಿರುದ್ದ ದಾಖಲಿಸಿದ್ದ ಅರ್ಧ ಶತಕ ಅನುಜ್ ರಾವತ್ ಬ್ಯಾಟಿಂಗ್ ವೈಖರಿಗೆ ಮತ್ತಷ್ಟು ಹೊಳಪು ತುಂಬಿದೆ.
ಮೂರು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಅನುಜ್ ರಾವತ್ ಮುಂಬೈ ವಿರುದ್ಧ ಮ್ಯಾಚ್ ವಿನ್ನಿಂಗ್ ಆಟವನ್ನಾಡಿದ್ರು. ಮುಂಬೈ ಬೌಲರ್ ಗಳಿಗೆ ದಿಟ್ಟ ಉತ್ತರವನ್ನು ನೀಡಿದ್ದ ಅನುಜ್ ರಾವತ್ ಅವರ ಬ್ಯಾಟಿಂಗ್ ಕೌಶಲ್ಯಕ್ಕೆ ಈಗ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಆರ್ ಸಿಬಿ ತಂಡದಲ್ಲಿ ಮತ್ತೊಬ್ಬ ಡೆಲ್ಲಿ ಆಟಗಾರನ ಉದಯವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂದ ಹಾಗೇ ಅನುಜ್ ರಾತ್ ಅವರು ಮೂಲತಃ ಉತ್ತರಖಂಡ ರಾಜ್ಯದವರು. ನೈನಿತಾಲ್ ನಗರದ ರಾಮ್ ನಗರದ ಅನುಜ್ ರಾವತ್ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ತಂದೆ ವೀರೇಂದರ್ ರಾವತ್. ಆರನೇ ವಯಸ್ಸಿನಲ್ಲೇ ಕ್ರಿಕೆಟ್ ಗ್ರಾಮರ್ಗಳನ್ನು ಸ್ಥಳೀಯ ಕೋಚ್ ಸತೀಶ್ ಪೊಖ್ರರಿಯಾಲ್ ಅವರಿಂದ ಕಲಿತುಕೊಂಡರು. ತಂದೆ ವೀರೆಂದರ್ ರಾವತ್ ಅವರಿಗೆ ಮಗನನ್ನು ಕ್ರಿಕೆಟಿಗನಾಗಿ ರೂಪಿಸಬೇಕು ಎಂದು ಕನಸು ಕಂಡಿದ್ದರು. ಅದಕ್ಕೆ ತಕ್ಕಂತೆ ಕೋಚ್ ಸತೀಶ್ ಸಲಹೆಯಂತೆ ಅನುಜ್ ರಾವತ್ ಅವರನ್ನು ಡೆಲ್ಲಿಗೆ ಕಳುಹಿಸುವಂತೆ ಸಲಹೆ ನೀಡಿದ್ದರು.
ಅನುತ್ ರಾವತ್, ಅಣ್ಣ ಪ್ರಶಾಂತ್ ರಾವತ್ ಮತ್ತು ತಾಯಿ ಆಶಾ ರಾವತ್ ಅವರು ದೆಹಲಿಯ ಬಾಡಿಗೆ ಮನೆಯಲ್ಲಿ ವಾಸ ಮಾಡಿದ್ರು. ಪ್ರಶಾಂತ್ ರಾವತ್ ಕಾಲೇಜ್ ಓದುತ್ತಿದ್ರೆ, ಅನುಜ್ ರಾವತ್ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದರು.
ಈ ನಡುವೆ, ವೀರೇಂದರ್ ರಾವತ್ ಗೆ ಅನುಜ್ ರಾವತ್ ಕ್ರಿಕೆಟ್ ಶುಲ್ಕ ಮತ್ತು ಹಿರಿ ಮಗ ಪ್ರಶಾಂತ್ ಕಾಲೇಜ್ ಶುಲ್ಕ, ಬಾಡಿಗೆ ವೆಚ್ಚವನ್ನು ಸರಿದೂಗಿಸಿಕೊಂಡು ಹೋಗಲು ತುಂಬಾನೇ ಕಷ್ಟವಾಗುತ್ತಿತ್ತು. ಹೀಗಾಗಿ ಗೆಳೆಯರಿಂದ ಸಾಲ ಮಾಡಿಕೊಂಡು ಮಗನ ಕ್ರಿಕೆಟ್ ಬದುಕಿಗೆ ಆಧಾರವಾಗಿದ್ರು. ಕ್ರಮೇಣ ಪ್ರಶಾಂತ್ ರಾವತ್ ಕಾಲೇಜ್ ಮುಗಿಸಿ ಸಂಜೆ ವೇಳೆ ಕೆಲಸ ಮಾಡಲು ಶುರು ಮಾಡಿದ್ದರು. ಇದರಿಂದ ತಮ್ಮನ ಕಾಲೇಜ್ ಶುಲ್ಕ ಮತ್ತು ಕ್ರಿಕೆಟ್ ಶುಲ್ಕವನ್ನು ಕಟ್ಟುವ ಜವಾಬ್ದಾರಿಯನ್ನು ವಹಿಸಿಕೊಂಡ್ರು.
![IPL 2022- RCB - Anuj Rawat - ಆರ್ ಸಿಬಿಯ ಸಿಡಿಲ ಮರಿ ಅನುಜ್ ರಾವತ್ - ಅಪ್ಪನ ಕನಸು ನನಸು ಮಾಡಿದ ಮಗ..! 4 ipl 2022 rcb sports karnataka Anuj Rawat IPL 2022](http://sportskarnataka.com/wp-content/uploads/2022/04/ANUJ-RAWAT.jpg)
ಆದ್ರೆ ದೆಹಲಿಯ ವಿವಿಧ ವಯೋಮಿತಿ ತಂಡದಲ್ಲಿ ಸ್ಥಾನ ಪಡೆಯುವುದು ಅಷ್ಟೊಂದು ಸುಲಭವಿರಲಿಲ್ಲ. 14 ವಯೋಮಿತಿ ಮತ್ತು 16 ವಯೋಮಿತಿ ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ ಸಹಜವಾಗಿ ಅನುಜ್ ರಾವತ್ಗೆ ನಿರಾಸೆಯಾಯ್ತು. ಆದ್ರೂ ವೀರೆಂದರ್ ರಾವತ್ ಆಸೆಯನ್ನು ಬಿಟ್ಟು ಬಿಡಲಿಲ್ಲ. ನನ್ನ ಮಗ ವೃತ್ತಿ ಪರ ಕ್ರಿಕೆಟಿಗನಾಗುತ್ತಾನೆ ಎಂಬ ಬಲವಾದ ನಂಬಿಕೆಯನ್ನಿಟ್ಟುಕೊಂಡಿದ್ದರು. ಅನುಜ್ ರಾವತ್ ಅವರ ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ಮುನ್ನೆಡೆಸಿದ್ದರು ವೀರೇಂದ್ರ ರಾವತ್.
ನಂತರ 19 ವಯೋಮಿತಿ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದ ಅನುಜ್ ರಾವತ್ ದೆಹಲಿ ರಣಜಿ ತಂಡದ ಪರ ಆಡಿದ್ದರು. ಈ ನಡುವೆ, ರಿಷಬ್ ಪಂತ್ ರಾಷ್ಟ್ರೀಯ ತಂಡಗಳಲ್ಲಿ ಆಡುತ್ತಿರುವುದರಿಂದ ಅನುಜ್ ರಾವತ್ ಗೆ ದೆಹಲಿ ತಂಡದಲ್ಲಿ ಅವಕಾಶಗಳು ಸಿಗುತ್ತಿದ್ದವು. In Rishabh Pant’s footsteps, Anuj Rawat blossoms in IPL 2022
ಇನ್ನೊಂದೆಡೆ ಅನುಜ್ ರಾವತ್ ಅವರನ್ನು ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಖರೀದಿ ಮಾಡಿತ್ತು. ಎರಡು ವರ್ಷಗಳ ಕಾಲ ರಾಜಸ್ತಾನ ರಾಯಲ್ಸ್ ತಂಡದಲ್ಲಿದ್ರೂ ಅವರಿಗೆ ಆಡಲು ಅವಕಾಶ ಸಿಕ್ಕಿದ್ದು ಕೇವಲ ಎರಡು ಪಂದ್ಯಗಳನ್ನು ಮಾತ್ರ.
ಇನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಅನುಜ್ ರಾವತ್ ಗೆ 3.4 ಕೋಟಿ ರೂಪಾಯಿ ಕೊಟ್ಟು ಆರ್ ಸಿಬಿ ತಂಡ ಖರೀದಿ ಮಾಡಿತ್ತು. ಅಷ್ಟೇ ಅಲ್ಲ, ನೆಟ್ಸ್ ನಲ್ಲಿ ಅನುಜ್ ರಾವತ್ ಅವರ ಬ್ಯಾಟಿಂಗ್ ವೈಖರಿಯು ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಸ್ ಮತ್ತು ಮೈಕ್ ಹೆಸನ್ ಅವರ ಗಮನ ಸೆಳೆಯಿತ್ತು. ಹೀಗಾಗಿಯೇ ಅನುಜ್ ರಾವತ್ ಗೆ ಆರ್ ಸಿಬಿಯ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಿತ್ತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಅನುಜ್ ರಾವತ್ ಈಗ ಆರ್ ಸಿಬಿಯ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮೆನ್ ಆಗಿರುವ ಅನುಜ್ ರಾವತ್ ಗೆ ತನ್ನ ಸಾಮಥ್ರ್ಯದ ಮೇಲೆ ಸಾಕಷ್ಟು ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಎದುರಾಳಿ ಬೌಲರ್ ಗಳ ಕಡೆಗೆ ಗಮನ ಹರಿಸದೇ ಅವರು ಎಸೆಯುವ ಎಸೆತಗಳನ್ನು ಯಾವ ರೀತಿ ಆಡಬೇಕು ಎಂಬುದನ್ನು ಅವರು ಚೆನ್ನಾಗಿ ಕಲಿತುಕೊಂಡಿದ್ದಾರೆ. ಹೀಗಾಗಿಯೇ ಅನುಜ್ ರಾವತ್ ಅವರು ಯಶ ಸಾಧಿಸಿರುವುದು ಎನ್ನುವುದು ಬಾಲ್ಯದ ಕೋಚ್ ಸತೀಶ್ ಅವರ ಅಭಿಮತವಾಗಿದೆ.
ಇನ್ನೊಂದೆಡೆ ತಮ್ಮನ ಕ್ರಿಕೆಟ್ ಬದುಕಿನ ಬಗ್ಗೆ ಅಣ್ಣ ಪ್ರಶಾಂತ್ ರಾವತ್ ಕೂಡ ಹೆಮ್ಮೆಪಡುತ್ತಿದ್ದಾರೆ. ದೆಹಲಿಯಲ್ಲಿ ಕಳೆದ ಕಷ್ಟದ ದಿನಗಳು ಮತ್ತು ಅಪ್ಪ – ಅಮ್ಮನ ಶ್ರಮ ಯಾವ ರೀತಿ ಇತ್ತು ಎಂಬುದನ್ನು ಕೂಡ ಪ್ರಶಾಂತ್ ರಾವತ್ ನೆನಪು ಮಾಡಿಕೊಂಡಿದ್ದಾರೆ .
ಒಟ್ಟಿನಲ್ಲಿ ಅನುಜ್ ರಾವತ್ ಅವರ ಕ್ರಿಕೆಟ್ ಬದುಕಿನ ಕಥೆ ರಿಷಬ್ ಪಂತ್ ಹಾದಿಯಲ್ಲೇ ಇದೆ. ರಿಷಬ್ ಪಂತ್ ಕೂಡ ಉತ್ತರಖಂಡ್ ನಿಂದ ದೆಹಲಿಗೆ ಶಿಫ್ಟ್ ಆಗಿದ್ದರು. ಅಲ್ಲದೆ ದೆಹಲಿಯಲ್ಲೇ ಕ್ರಿಕೆಟ್ ಬದುಕನ್ನು ರೂಪಿಸಿಕೊಂಡಿದ್ದರು. ಇದೀಗ ಅದೇ ಹಾದಿಯಲ್ಲಿದ್ದಾರೆ ಅನುಜ್ ರಾವತ್