ಐಪಿಎಲ್ 15ನೇ ಆವೃತ್ತಿ ಜೋರಾಗಿ ನಡೆಯುತ್ತಿದೆ. ಸಿಕ್ಕಾಪಟ್ಟೆ ರೋಚಕ ಪಂದ್ಯಗಳು ನಡೆಯುತ್ತಿವೆ. ಐಪಿಎಲ್ ತಂಡಗಳ ವಿಭಿನ್ನ ರಣತಂತ್ರಗಳು ಗಮನ ಸೆಳೆಯುತ್ತಿವೆ. 10 ತಂಡಗಳು ಅಖಾಡದಲ್ಲಿದ್ದರೂ ಎಂಟು ತಂಡಗಳು ಮಾತ್ರ ಕಾದಾಟ ನಡೆಸುತ್ತಿವೆ ಅನ್ನುವ ಹಾಗಾಗಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಹಳೆದ ಖದರ್ ಹೊಂದಿಲ್ಲ. ಸತತ 4 ಸೋಲುಗಳು ತಂಡವನ್ನು ಗೆಲುವಿನ ರುಚಿ ನೋಡಲು ಬಿಟ್ಟಿಲ್ಲ. ಅಷ್ಟೇ ಅಲ್ಲ ಮುಂಬೈ ಮತ್ತು ಚೆನ್ನೈ ತಂಡಗಳ ಪರದಾಟ ಐಪಿಎಲ್ನಲ್ಲಿ 10 ತಂಡವಲ್ಲ ಎಂಟೇ ತಂಡ ಇದೆ ಅನ್ನುವ ಹಾಗೇ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಕೆಕೆಆರ್, ಪಂಜಾಬ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ವಿರುದ್ಧ ಸೋತಿದೆ. ಇನ್ನು 10 ಪಂದ್ಯಗಳು ಕೈಯಲ್ಲಿ ಉಳಿದಿವೆ. ಆದರೆ ಇನ್ನೆರಡು ಪಂದ್ಯಗಳಲ್ಲಿ ಸೋತರೆ ಈ ಬಾರಿಯ ಕಪ್ ಆಸೆಗೆ ಎಳ್ಳುನೀರು ಬಿಡಬೇಕಾಗುತ್ತದೆ. ಹೀಗಾಗಿ ಚೆನ್ನೈ ಸ್ಥಿತಿ ಮಾಡು ಇಲ್ಲವೆ ಮಡಿ ಅನ್ನುವ ಮಟ್ಟಕ್ಕಿದೆ.
ಮುಂಬೈ ಇಂಡಿಯನ್ಸ್ ಕೆಕೆಆರ್, ಡೆಲ್ಲಿ, ಆರ್ಸಿಬಿ ಮತ್ತು ಪಂಜಾಬ್ ವಿರುದ್ಧ ಸೋತಿದೆ. ಮುಂಬೈ ಮತ್ತು ಚೆನ್ನೈ ಸ್ಥಿತಿಒಂದೇ ರೀತಿ ಇದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯ ಮಾಜಿ ಚಾಂಪಿಯನ್ನರ ಶತ್ರುವಾಗಿದೆ.
ಇನ್ನೊಂದೆಡೆ ಹೊಸ ತಂಡಗಳಾದ ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಜೈಂಟ್ಸ್ ಸ್ಥಿರ ಹಾಗೂ ಅದ್ಭುತ ಪ್ರದರ್ಶನ ನೀಡ್ತಿವೆ. ಹಳೇಯ ತಂಡಗಳ ಪೈಕಿ ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ಮಿಂಚುತ್ತಿದೆ. ಒಟ್ಟಿನಲ್ಲಿ ಮುಂಬೈ ಮತ್ತು ಚೆನ್ನೈ ತಂಡಗಳು ಪುಟಿದೆದ್ದರೆ ಅಂಕಪಟ್ಟಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಪ್ರತೀ ಪಂದ್ಯದ ಫಲಿತಾಂಶದ ಜೊತೆಗೆ ರನ್ ರೇಟ್ ಕೂಡ ಆಟಕ್ಕೆ ಬರುತ್ತದೆ.