ICC women’s ODI World Cup 2022 – ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ..!
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ನಿಗದಿಯಾದಂತೆ ಮಾರ್ಚ್ 4ರಿಂದ ನ್ಯೂಜಿಲೆಂಡ್ ನಲ್ಲಿ ಟೂರ್ನಿ ನಡೆಯಲಿದೆ ಎಂದು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸಿಇಒ ಆಂಡ್ರಿಯಾ ನೆಲ್ಸನ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ನಿಗದಿಯಾದಂತೆ 2021ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ನ್ಯೂಜಿಲೆಂಡ್ ನಲ್ಲಿ ನಡೆಯಬೇಕಿತ್ತು. ಆದ್ರೆ ಕೋವಿಡ್ ಸೋಂಕಿನಿಂದಾಗಿ ಮುಂದೂಡಲಾಗಿತ್ತು. ಇದೀಗ ನ್ಯೂಜಿಲೆಂಡ್ ನಲ್ಲಿ ಒಮ್ರಿಕಾನ್ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವೇಳಾಪಟ್ಟಿ ಮತ್ತು ತಾಣಗಳು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು.
ಆದ್ರೆ ಐಸಿಸಿ ಸಿಇಒ ಆಂಡ್ರಿಯಾ ನೆಲ್ಸನ್ ಅವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಈ ಹಿಂದೆ ನಿಗದಿಯಾದಂತೆ ಮಾರ್ಚ್ 4ರಿಂದ ನ್ಯೂಜಿಲೆಂಡ್ ನ ಆರು ಅಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.
ಟೂರ್ನಿ ಆರಂಭವಾಗುವುದಕ್ಕೆ ಇನ್ನೂ 35 ದಿನಗಳಿವೆ. ಫೈನಲ್ ಪಂದ್ಯಕ್ಕೆ 66 ದಿನಗಳಿವೆ. ನ್ಯೂಜಿಲೆಂಡ್ ಕೋವಿಡ್ ಮಾರ್ಗಸೂಚಿಯ ಕಠಿಣ ನಿಯಮಗಳಿವೆ. ಆದ್ರೂ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡಲು ಇಡೀ ದೇಶವೇ ಟೊಂಕಕಟ್ಟಿ ನಿಂತಿದೆ. ಹೀಗಾಗಿ ಟೂರ್ನಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂದು ಆಂಡ್ರಿಯಾ ನೆಲ್ಸನ್ ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 4ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಹೋರಾಟ ನಡೆಸಲಿವೆ. ನ್ಯೂಜಿಲೆಂಡ್ ನ ಟೌರಾಂಗ, ಡನ್‍ಡೀನ್, ಹ್ಯಾಮಿಲ್ಟನ್, ವೆಲ್ಲಿಂಗ್ಟನ್, ಆಕ್ಲೆಂಡ್, ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಕ್ರೈಸ್ಟ್ ಚರ್ಚ್ ನಲ್ಲೇ ನಡೆಯಲಿದೆ ಎಂದು ನೆಲ್ಸನ್ ಹೇಳಿದ್ದಾರೆ.