ಐಸಿಸಿ ಏಕದಿನ ರ್ಯಾಂಕಿಂಗ್ : ಎರಡನೇ ಸ್ಥಾನದಲ್ಲಿ ವಿರಾಟ್
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಉತ್ತಮವಾದ ಪ್ರದರ್ಶನವನ್ನೇ ನೀಡಿದ್ದರು. ಮೂರು ಪಂದ್ಯಗಳಲ್ಲಿ ಕೊಹ್ಲಿ 116 ರನ್ ದಾಖಲಿಸಿದ್ದರು. ಹೀಗಾಗಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕೊಹ್ಲಿ ಉಳಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ 836 ಅಂಕ ಪಡೆದುಕೊಂಡಿದ್ರೆ, ರೋಹಿತ್ ಶರ್ಮಾ 801 ಅಂಕ ಪಡೆದಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಝಮ್ ಅವರು 873 ಅಂಕಗಳೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಹಾಗೇ ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲೆಂಡ್ ನ ಟ್ರೆಂಟ್ ಬೌಲ್ಟ್ ಹಾಗೂ ಆಸ್ಟ್ರೇಲಿಯಾದ ಜೋಶ್ ಹಾಝಲ್ ವುಡ್ ಅವರು ಮೊದಲ ಮತ್ತು ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಭುವನೇಶ್ವರ್ ಕುಮಾರ್ ಅವರು ನಾಲ್ಕು ಸ್ಥಾನ ಹಿನ್ನಡೆ ಅನುಭವಿಸಿದ್ದಾರೆ. ಸದ್ಯ ಭುವಿ 22ನೇ ಸ್ಥಾನದಲ್ಲಿದ್ದಾರೆ.
ಇನ್ನು ಟೀಮ್ ಇಂಡಿಯಾ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಲುಂಗಿ ಎನ್ಗಿಡಿ ಮತ್ತು ಕೇಶವ್ ಮಹಾರಾಜ್ ಅವರು ಟಾಪ್ ಟ್ವೆಂಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್ ರೌಂಡ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಆಂಡಿಲೆ ಫೆಹ್ಲುಕ್ವಾವೊ ಅವರು 15ನೇ ಸ್ಥಾನದಲ್ಲಿದ್ದಾರೆ.