ಭಯೋತ್ಪಾನೆಯ ಅತಂಕ… ಪಾಕ್ ನೆಲಕ್ಕೆ ಕಾಲಿಡಲು ಆಸ್ಟ್ರೇಲಿಯಾ ಆಟಗಾರರು ನಕಾರ..!
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ನಡೆಸಲು ಹಿಂದೆಟು ಹಾಕುತ್ತಿದೆ ಎಂದು ಆಸ್ಟ್ರೇಲಿಯಾದ ದಿನ ಪತ್ರಿಕೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
24 ವರ್ಷಗಳ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಿಗೆ ನೀಡಿತ್ತು. ನಿಗದಿತ ವೇಳಾಪಟ್ಟಿಯಂತೆ ಮಾರ್ಚ್3ರಿಂದ ಮೊದಲ ಟಿ-20 ಪಂದ್ಯ ನಡೆಯಲಿದೆ. ಪಾಕ್ ನೆಲದಲ್ಲಿ ಆಸ್ಟ್ರೇಲಿಯಾ ತಂಡ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯ ಹಾಗೂ ಏಕೈಕ ಟಿ-20 ಪಂದ್ಯವನ್ನು ಆಡಲಿದೆ.
ಆದ್ರೆ ಈ ಸರಣಿ ಈಗ ತೂಗೂಯ್ಯಾಲೆಯಲ್ಲಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಪಾಕ್ ಪ್ರವಾಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ಚಟುವಟಿಕೆಗಳು ಹೆಚ್ಚಾಗಿವೆ. ಅದ್ರಲ್ಲೂ ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಡಳಿತ ಚುಕ್ಕಾಣಿ ಹಿಡಿದ ನಂತರ ಭಯೋತ್ಪಾದನೆ ಹೆಚ್ಚಾಗಿದೆಯಂತೆ. ಹಾಗಂತ ಪಾಕ್ ನ ವಿದೇಶಾಂಗ ಸಚಿವ ಶೇಖ್ ರಶೀದ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಕೂಡ ವರದಿ ಮಾಡಿವೆ.
1998ರಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕ್ ನೆಲಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಪಾಕ್ ವಿರುದ್ದ ತಟಸ್ಥ ತಾಣದಲ್ಲಿ ಸರಣಿಗಳನ್ನು ಆಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕೆಲವು ವಿದೇಶಿ ತಂಡಗಳು ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿವೆ. ಆದ್ರೆ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಕೊನೆಯ ಕ್ಷಣದಲ್ಲಿ ಪಾಕ್ ನೆಲದಲ್ಲಿ ಆಡಲು ಹಿಂದೇಟು ಹಾಕಿವೆ.
ಇನ್ನು ಭಾರತವಂತೂ ಪಾಕ್ ನೆಲಕ್ಕೆ ಕಾಲಿಡಲು ಕೂಡ ಒಪ್ಪುತಿಲ್ಲ. ಪಿಸಿಬಿ ಐಸಿಸಿ ಮೇಲೆ ಎಷ್ಟೇ ಒತ್ತಡ ಹೇರಿದ್ರೂ ಕ್ಯಾರೇ ಅನ್ನುತ್ತಿಲ್ಲ.
ಈ ನಡುವೆ, ಪಿಸಿಬಿ ಮುಖ್ಯಸ್ಥರಾಗಿರುವ ರಮೀಜ್ ರಾಝಾ ಅವರು ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಕ್ರಿಕೆಟ್ ಮಂಡಳಿಗಳು ಒಪ್ಪಿಗೆ ನೀಡಿದ್ರೂ ಆಟಗಾರರು ಪಾಕ್ ನೆಲಕ್ಕೆ ಕಾಲಿಡಲು ಹೆದರುತ್ತಿದ್ದಾರೆ.
ಒಟ್ಟಿನಲ್ಲಿ ಪಾಕ್ ನೆಲದಲ್ಲಿ ವಿದೇಶಿ ತಂಡಗಳು ಕ್ರಿಕೆಟ್ ಆಡೋದು ಗಗನ ಕುಸುಮವಾಗಿಬಿಟ್ಟಿದೆ. ತಾವೇ ಪೋಷಣೆ ಮಾಡಿರುವ ಭಯೋತ್ಪಾದನೆಯ ಸಂಘಟನೆಯಿಂದ ಪಾಕ್ ನಲ್ಲಿ ಕ್ರಿಕೆಟ್ ಕಮರಿ ಹೋಗುತ್ತಿವೆ. ಆದ್ರೆ ಪಾಕ್ ನಲ್ಲಿ ಅದ್ಭುತ ಆಟಗಾರರು ಇದ್ದಾರೆ. ತಟಸ್ಥ ತಾಣದಲ್ಲಿ ಪಂದ್ಯವನ್ನು ಆಯೋಜನೆ ಮಾಡುತ್ತಿರುವುದರಿಂದ ಪಿಸಿಬಿಯ ಬೊಕ್ಕಸ ಕೂಡ ತುಂಬುತ್ತಿಲ್ಲ.