ಏಕದಿನ ಕ್ರಿಕೆಟ್ನಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪಾಕಿಸ್ತಾನ, ಐಸಿಸಿ ODI ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾವನ್ನ ಹಿಂದಿಕ್ಕಿ 4ನೇ ಸ್ಥಾನಕ್ಕೇರಿದೆ.
ಬಾಬರ್ ಆಜಂ ನಾಯಕತ್ವದ ಪಾಕಿಸ್ತಾನ ತಂಡ ಇತ್ತೀಚಿಗೆ ಮುಗಿದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಗೆದ್ದ ಸರಣಿ ವಶಪಡಿಸಿಕೊಂಡಿತ್ತು. ಪಾಕ್ ತಂಡದ ಈ ಯಶಸ್ವಿ ಪ್ರದರ್ಶನ ತಂಡದ ರ್ಯಾಂಕಿಂಗ್ ಉತ್ತಮಗೊಳಿಸಿಕೊಳ್ಳಲು ಸಾಧ್ಯವಾಯಿತು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ, ODI ರ್ಯಾಂಕಿಂಗ್ ಪಟ್ಟಿಯಲ್ಲಿ 102 ರೇಟಿಂಗ್ ಪಾಯಿಂಟ್ಸ್ನೊಂದಿಗೆ 5ನೇ ಸ್ಥಾನದಲ್ಲಿತ್ತು.
ಆದರೆ ಕೆರೆಬಿಯನ್ನರ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಾಕ್ ತಂಡ, ಪ್ರಸ್ತುತ 106 ರೇಟಿಂಗ್ ಪಾಯಿಂಟ್ಸ್ ಮೂಲಕ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನಕ್ಕೇರಿದೆ. ಹೀಗಾಗಿ 105 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಭಾರತ, 1 ಪಾಯಿಂಟ್ಸ್ ಹಿನ್ನಡೆಯೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ. ಟೀಂ ಇಂಡಿಯಾ ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಗೆದ್ದಿತ್ತು. ಆದರೆ ಸೌತ್ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ 0-3 ಅಂತರದಿಂದ ಸೋಲಿನ ಆಘಾತ ಕಂಡಿತ್ತು.
ಯಶಸ್ಸಿನ ಅಲೆಯಲ್ಲಿ ಪಾಕ್:
ಬಾಬರ್ ಆಜ಼ಂ ಸಾರಥ್ಯದ ಪಾಕಿಸ್ತಾನ ಇತ್ತೀಚಿಗೆ ಏಕದಿನ ಕ್ರಿಕೆಟ್ನಲ್ಲಿ ದೊಡ್ಡ ಸಕ್ಸಸ್ ಕಂಡಿದೆ. 2022ರಲ್ಲಿ ಆಡಿರುವ 5 ಏಕದಿನ ಪಂದ್ಯಗಳಲ್ಲಿ ಪಾಕ್ ತಂಡ 4ರಲ್ಲಿ ಗೆದ್ದು, 1ರಲ್ಲಿ ಸೋಲು ಕಂಡಿದೆ. ಕೆಲವು ತಿಂಗಳುಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ 2-1ರಿಂದ ಗೆದ್ದಿದ್ದ ಪಾಕಿಸ್ತಾನ್, ಇದೀಗ ವೆಸ್ಟ್ ಇಂಡೀಸ್ ತಂಡವನ್ನು 3-0 ಅಂತರದಿಂದ ಮಣಿಸಿದೆ.
ODI ರ್ಯಾಂಕಿಂಗ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿರುವ ಭಾರತಕ್ಕೆ ಮುಂಬರುವ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯುವ ಏಕದಿನ ಸರಣಿಯಲ್ಲಿ ಪಾಕಿಸ್ತಾನ್ ತಂಡವನ್ನ ಹಿಂದಿಕ್ಕಿವ ಅವಕಾಶ ದೊರೆಯಲಿದೆ. ಸದ್ಯ 4ನೇ ಸ್ಥಾನಕ್ಕೇರಿರುವ ಪಾಕಿಸ್ತಾನ ತನ್ನ ಮುಂದಿನ ಏಕದಿನ ಸರಣಿಯನ್ನು ಆಗಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.