ಟೆನಿಸ್ – ಆಸ್ಟ್ರೇಲಿಯನ್ ಓಪನ್ ಟೂರ್ನಿಗೆ ಒಮಿಕ್ರಾನ್ ಸೋಂಕಿನ ಆತಂಕ…!
2022ರ ಆಸ್ಟ್ರೇಲಿಯ ಓಪನ್ ಟೆನಿಸ್ ಟೂರ್ನಿಗೆ ಒಮಿಕ್ರಾನ್ ವೈರಸ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆಸ್ಟ್ರೇಲಿಯಾದಲ್ಲಿ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಸಂಘಟಕರಿಗೆ ಚಿಂತೆಯನ್ನುಂಟು ಮಾಡಿದೆ.
2022ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯನ್ನು ಸಂಘಟಿಸುವುದು ಕಠಿಣವಾದ ಸವಾಲು. ಕಳೆದ ಬಾರಿಗಿಂತ 10 ಪಟ್ಟು ಹೆಚ್ಚು ಸವಾಲಿನದ್ದಾಗಿ ಎಂದು ಆಸ್ಟ್ರೆಲಿಯನ್ ಓಪನ್ ಟೆನಿಸ್ ಟೂರ್ನಿಯ ಬಾಸ್ ಕ್ರೇಗ್ ಟಿಲೈ ಹೇಳಿದ್ದಾರೆ.
2022ರ ಜನವರಿ 17ರಿಂದ ಟೂರ್ನಿಯನ್ನು ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಆದ್ರೆ ಒಮಿಕ್ರಾನ್ ಆತಂಕವಂತೂ ಇದ್ದೇ ಇದೆ. ಈ ನಡುವೆ, ಆಸ್ಟ್ರೇಲಿಯಾ ಸರ್ಕಾರ ವಿದೇಶಿ ಪ್ರವಾಸಿಗರಿಗೆ ನಿರ್ಬಂದ ಕೂಡ ವಿಧಿಸಿದೆ.
ಇನ್ನು ಟೂರ್ನಿಯಲ್ಲಿ ಆಡುವ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕು. ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಟೂರ್ನಿಯನ್ನು ನಡೆಸಲು ಆಯೋಜಕರು ಮುಂದಾಗಿದ್ದಾರೆ.
ಈ ನಡುವೆ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ತ್ರಿಮೂರ್ತಿಗಳಾದ ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜಾಕೊವಿಕ್ ಆಡೋದು ಅನುಮಾನವಾಗಿದೆ.
ರೋಜರ್ ಫೆಡರರ್ ಅವರು ಗಾಯದಿಂದ ಬಳಲುತ್ತಿದ್ದಾರೆ. ಹಾಗೆ ಗಾಯದಿಂದ ಚೇತರಿಸಿಕೊಂಡಿರುವ ನಡಾಲ್ ಕೋವಿಡ್ ಸೋಂಕಿನಿಂದ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ನೊವಾಕ್ ಜಾಕೊವಿಕ್ ಅವರು ಲಸಿಕೆ ವಿಚಾರದಲ್ಲಿ ಗೊಂದಲವನ್ನುಂಟು ಮಾಡಿದ್ದಾರೆ. ಮಾಜಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಕೂಡ ಈ ಬಾರಿಯ ಆಸ್ಟ್ರೆಲಿಯನ್ ಓಪನ್ ಟೂರ್ನಿಯಲ್ಲಿ ಆಡುತ್ತಿಲ್ಲ.