ಅತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿರುವ ನ್ಯೂಜಿ಼ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕಿವೀಸ್ ತಂಡದ ವೇಗದ ಬೌಲರ್ ಕೈಲ್ ಜೇಮಿಸನ್ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ಔಟ್ ಆಗಿದ್ದಾರೆ.
ನಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ನಲ್ಲಿ ನಡೆದ ಉಭಯ ತಂಡಗಳ 2ನೇ ಟೆಸ್ಟ್ನ ಮೂರನೇ ದಿನದಾಟದಲ್ಲಿ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಕೈಲ್ ಜೇಮಿಸನ್ ಗಾಯಗೊಂಡಿದ್ದರು. ಹೀಗಾಗಿ ದಿನದಾಟದ ಅರ್ಧದಲ್ಲಿ ಪೆವಿಲಿಯನ್ಗೆ ಮರಳಿದ ಕೇಲ್ ಜೇಮಿಸನ್ ಅವರ ಲೂವರ್ ಲೆಫ್ಟ್ ಬ್ಯಾಕ್ನಲ್ಲಿ ಗಾಯವಾಗಿರುವುದು ಎಂಆರ್ಐ ಸ್ಕ್ಯಾನ್ನಿಂದ ಕಂಡು ಬಂದಿದೆ. ಇದರ ಪರಿಣಾಮ ಯುವ ವೇಗದ ಬೌಲರ್, ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಗಾಯದ ಸಮಸ್ಯೆಗೆ ತುತ್ತಾಗಿರುವ ಕೈಲ್ ಜೇಮಿಸನ್ ಚೇತರಿಸಿಕೊಳ್ಳಲು ಕನಿಷ್ಠ ನಾಲ್ಕು ವಾರಗಳ ವಿಶ್ರಾಂತಿ ಅಗತ್ಯವಿದೆ. ಇದಾದ ನಂತರದಲ್ಲಿ ಜೇಮಿಸನ್ ರಿಹ್ಯಾಬಿಲಿಟೇಷನ್ಗೆ ಒಳಪಡಲಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಕಮ್ಬ್ಯಾಕ್ ಮಾಡಲಿದ್ದಾರೆ. ಲಾರ್ಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಕೈಲ್ ಜೇಮಿಸನ್ ಅದ್ಭುತ ಪ್ರದರ್ಶನ ನೀಡಿದ್ದರು. ಇದೀಗ ಜೇಮಿಸನ್ ಅಲಭ್ಯತೆ ತಂಡಕ್ಕೆ ದೊಡ್ಡ ಹಿನ್ನಡೆ ಆಗಲಿದ್ದು, ಈ ವರ್ಷದಲ್ಲಿ ನಡೆಯುವ ಮುಂದಿನ ಸರಣಿಗಳಿಗೆ ಜೇಮಿಸನ್ ಬಲಿಷ್ಠ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ನ್ಯೂಜಿ಼ಲೆಂಡ್ ತರಬೇತುದಾರ ಗ್ಯಾರಿ ಸ್ಟಡ್ ತಿಳಿಸಿದ್ದಾರೆ.
ಕೈಲ್ ಜೇಮಿಸನ್ ಅನುಪಸ್ಥಿತಿಯಲ್ಲಿ ಈಗಾಗಲೇ ನ್ಯೂಜಿ಼ಲೆಂಡ್ ತಂಡದ ಜೊತೆಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಬ್ಲೇರ್ ಟಿಕ್ನರ್ ಅವರನ್ನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಜೂ.23ರಿಂದ ಆರಂಭವಾಗಲಿರುವ 3ನೇ ಟೆಸ್ಟ್ನಲ್ಲಿ ಬ್ಲೇರ್ ಟಿಕ್ನರ್, ಕಿವೀಸ್ ತಂಡದಲ್ಲಿ ಆಡಲಿದ್ದಾರೆ.