Team India – ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ಕೆ.ಎಲ್. ರಾಹುಲ್ ಅಲಭ್ಯ..?

ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್. ರಾಹುಲ್ ಅವರು ಇನ್ನೂ ಕೂಡ ಫಿಟ್ ಆಗಿಲ್ಲ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಮುಂಬರುವ ಇಂಗ್ಲೆಂಡ್ ಪ್ರವಾಸದಿಂದಲೂ ಹೊರಗುಳಿಯಲಿದ್ದಾರೆ.
ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ದದ ಟಿ-20 ಸರಣಿಯಿಂದ ಹೊರಗುಳಿದಿರುವ ಕೆ.ಎಲ್. ರಾಹುಲ್, ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.
ಟೀಮ್ ಇಂಡಿಯಾ ಜೂನ್ 19ರಂದು ಇಂಗ್ಲೆಂಡ್ ಗೆ ತೆರಳಲಿದೆ. ಇದೇ ವೇಳೆ ಕಳೆದ ವರ್ಷ ಬಾಕಿ ಉಳಿದಿರುವ ಏಕೈಕ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಎಡ್ಜ್ ಬಾಸ್ಟನ್ ನಲ್ಲಿ ಆಡಲಿವೆ.
ಕಳೆದ ವರ್ಷ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಪಡೆ 2-1ರಿಂದ ಗೆದ್ದುಕೊಂಡಿತ್ತು. ಕೋವಿಡ್ ಸೋಂಕಿನಿಂದಾಗಿ ಕೊನೆಯ ಟೆಸ್ಟ್ ಪಂದ್ಯ ರದ್ದುಗೊಂಡಿತ್ತು.

ಸದ್ಯ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೆ.ಎಲ್. ರಾಹುಲ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಕೆ.ಎಲ್. ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೆ.ಎಲ್. ರಾಹುಲ್ 315 ರನ್ ಗಳಿಸಿದ್ದರು. ಅಲ್ಲದೆ ಒಂದು ಶತಕವನ್ನು ಸಿಡಿಸಿದ್ದರು.
ಇನ್ನು ಕೆ.ಎಲ್. ರಾಹುಲ್ ಅವರು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಐಪಿಎಲ್ ಗೆ ಮುನ್ನ ನಡೆದಿದ್ದ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಗೂ ಕೆ.ಎಲ್. ರಾಹುಲ್ ಅಲಭ್ಯರಾಗಿದ್ದರು.
ಆದ್ರೆ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮತ್ತೆ ಕಮ್ ಬ್ಯಾಕ್ ನೀಡುವ ಸೂಚನೆ ನೀಡಿದ್ದರು. ಅಷ್ಟರಲ್ಲೇ ಮತ್ತೆ ಗಾಯಕ್ಕೆ ಒಳಗಾಗಿದ್ದಾರೆ. ಇದೀಗ ಕೆ.ಎಲ್. ರಾಹುಲ್ ಶೀಘ್ರದಲ್ಲೇ ಗಾಯದಿಂದ ಚೇತರಿಸಿಕೊಂಡು ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ.