ಅತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಟೆಸ್ಟ್ ಪಂದ್ಯಕ್ಕಾಗಿ ಸಿದ್ಧತೆ ಆರಂಭಿಸಿರುವ ಬೆನ್ನಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮ, ಕೋವಿಡ್-19 ಸೋಂಕಿಗೆ ತುತ್ತಾಗಿರುವುದು ತಂಡಕ್ಕೆ ದೊಡ್ಡ ಶಾಕ್ ನೀಡಿದೆ.
ಜುಲೈ 1ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಈಗಾಗಲೇ ಆಂಗ್ಲರ ನಾಡಿಗೆ ತೆರಳಿರುವ ಟೀಂ ಇಂಡಿಯಾ, ಅಭ್ಯಾಸ ಪಂದ್ಯದಲ್ಲಿ ಸಹ ಪಾಲ್ಗೊಂಡಿದೆ. ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿದ್ದ ರೋಹಿತ್ ಶರ್ಮ ಮೊದಲೆರಡು ದಿನಗಳ ಆಟದಲ್ಲಿ ಪಾಲ್ಗೊಂಡಿದ್ದರು. ಆದರೆ ಇದೀಗ ರೋಹಿತ್ ಶರ್ಮ ಅವರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಈ ಕಾರಣದಿಂದ ಟೀಂ ಇಂಡಿಯಾ ನಾಯಕ ಹೋಟೆಲ್ನಲ್ಲಿ ಐಸೋಲೇಟ್ ಆಗಿದ್ದಾರೆ.
ರೋಹಿತ್ ಶರ್ಮ ಅವರಿಗೆ ಶನಿವಾರ ರಾಪಿಡ್ ಆಂಟಿಜನ್ ಟೆಸ್ಟ್ ಮಾಡಿದ ಸಂದರ್ಭದಲ್ಲಿ ಕೋವಿಡ್-19 ಪಾಸಿಟಿವ್ ಬಂದಿದೆ. ಈ ಕಾರಣದಿಂದಾಗಿ ಹಿಟ್ ಮ್ಯಾನ್, 3ನೇ ದಿನದಾಟದ ಅಭ್ಯಾಸ ಪಂದ್ಯದಲ್ಲಿ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಐಸೋಲೇಷನ್ನಲ್ಲಿರುವ ರೋಹಿತ್ ಶರ್ಮ, ಬಿಸಿಸಿಐ ವೈದ್ಯಕೀಯ ತಂಡದ ನಿಗದಲ್ಲಿದ್ದು, ಜುಲೈ 1ರಿಂದ ಆರಂಭ ಆಗಲಿರುವ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿಯುತ್ತಾರಾ? ಎಂಬುದರ ಬಗ್ಗೆ ಬಿಸಿಸಿಐ ಈವರೆಗೂ ಸ್ಪಷ್ಟನೆ ನೀಡಿಲ್ಲ.
ಒಂದೊಮ್ಮೆ 5ನೇ ಟೆಸ್ಟ್ನಿಂದ ರೋಹಿತ್ ಶರ್ಮ ಹೊರಗುಳಿದರೆ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಈಗಾಗಲೇ ಗಾಯದ ಸಮಸ್ಯೆ ಕಾರಣದಿಂದ ಇಂಗ್ಲೆಂಡ್ ಪ್ರವಾಸದಿಂದ ಕೆ.ಎಲ್. ರಾಹುಲ್ ಔಟ್ ಆಗಿದ್ದು, ಇದೀಗ ರೋಹಿತ್ ಶರ್ಮ ಸಹ ಅಲಭ್ಯರಾದರೆ ಭಾರತ ತಂಡದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಶರ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆಡಿದ್ದ 4 ಟೆಸ್ಟ್ಗಳಿಂದ 50ರ ಸರಾಸರಿಯಲ್ಲಿ 368 ರನ್ಗಳಿಸಿದ್ದರು. ಅಲ್ಲದೇ ಟೆಸ್ಟ್ ಕ್ರಿಕೆಟ್ನಲ್ಲಿ ವಿದೇಶಿ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಹಿಟ್ ಮ್ಯಾನ್, ತಂಡದ ಬ್ಯಾಟಿಂಗ್ ಬಲವನ್ನ ಹೆಚ್ಚಿಸಿದ್ದರು. ಇದೀಗ ರೋಹಿತ್ ಶರ್ಮಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವುದು ತಂಡಕ್ಕೆ ಆಘಾತ ಮೂಡಿಸಿದೆ.