ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿ಼ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿರುವ ಇಂಗ್ಲೆಂಡ್, ಇದೇ ಜೋಶ್‌ನಲ್ಲಿ ಸದ್ಯ ಭಾರತದ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಜುಲೈ 1ರಿಂದ ಆರಂಭ ಆಗಲಿರುವ 5ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ 15 ಆಟಗಾರರ ತಂಡ ಪ್ರಕಟಿಸಿದೆ.
ಕಿವೀಸ್ ವಿರುದ್ಧದ ಗೆಲುವಿನ ಅಲೆಯಲ್ಲಿರುವ ಇಂಗ್ಲೆಂಡ್, ಸ್ಯಾಮ್ ಬಿಲ್ಲಿಂಗ್ಸ್ ಅವರನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಉಳಿದಂತೆ ನ್ಯೂಜಿ಼ಲೆಂಡ್ ವಿರುದ್ಧ ಸರಣಿಯಲ್ಲಿ ಆಡಿದ್ದ ತಂಡದೊಂದಿಗೆ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಉಭಯ ತಂಡಗಳ ನಡುವಿನ 5ನೇ ಟೆಸ್ಟ್ ಪಂದ್ಯ ಜುಲೈ 1ರಿಂದ ಆರಂಭವಾಗಲಿದೆ.

ಈ ಹಿಂದೆ ಐದು ಪಂದ್ಯಗಳ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ನಾಲ್ಕು ಪಂದ್ಯಗಳನ್ನ ಆಡಿತ್ತು. ಈ ವೇಳೆ ಎದುರಾದ ಕೋವಿಡ್-19 ಆತಂಕದ ಕಾರಣದಿಂದಾಗಿ 5ನೇ ಪಂದ್ಯವನ್ನು ಮುಂದೂಡಲಾಗಿತ್ತು. ಈ ಮೊದಲು ಇಂಗ್ಲೆಂಡ್ ವಿರುದ್ಧದ ನಡೆದಿರುವ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ, ಐದು ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಕಾಯ್ದುಕೊಂಡಿದೆ.

ಆದರೆ ಸದ್ಯ ಎರಡು ತಂಡಗಳಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಈ ಹಿಂದೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ, ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿತ್ತು. ಇದೀಗ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿರುವ ಪರಿಣಾಮ ರೋಹಿತ್ ಶರ್ಮ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಇನ್ನೂ ಅತಿಥೇಯ ಇಂಗ್ಲೆಂಡ್ ತಂಡದಲ್ಲೂ ಮಹತ್ವದ ಬದಲಾವಣೆ ಆಗಿದ್ದು, ಈ ಮೊದಲು ಜೋ ರೂಟ್ ನಾಯಕತ್ವದಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದ್ದ ಅತಿಥೇಯರು, ಪ್ರಸ್ತುತ ಬೆನ್ ಸ್ಟೋಕ್ಸ್ ನಾಯಕತ್ವ ಹಾಗೂ ಬ್ರೆಂಡನ್ ಮೆಕ್ಕಲಂ ತರಬೇತಿಯೊಂದಿಗೆ ಭಾರತ ವಿರುದ್ಧದ ಮುಖಾಮುಖಿಗೆ ಸಜ್ಜಾಗಿದೆ.
5ನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡ:
ಬೆನ್ ಸ್ಟೋಕ್ಸ್(ನಾಯಕ), ಜೇಮ್ಸ್ ಆಂಡರ್ಸನ್, ಜಾನಿ ಬೈರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೋಕ್, ಜ್ಯಾಕ್ ಕ್ರಾವ್ಲೆ, ಬೆನ್ ಫೋಕ್ಸ್, ಜ್ಯಾಕ್ ಲೀಚ್, ಅಲೆಕ್ಸ್ ಲೀಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಮ್ಯಾಥ್ಯೂ ಪಾಟ್ಸ್, ಓಲ್ಲಿ ಪೋಪ್, ಜೋ ರೂಟ್.