ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಕೋವಿಡ್-19 ಸೋಂಕಿಗೆ ತುತ್ತಾಗಿರುವುದು ತಂಡದ ಆತಂಕ ಹೆಚ್ಚಿಸಿದೆ. ಈ ನಡುವೆ ಹಿಟ್ ಮ್ಯಾನ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನ ಮುನ್ನಡೆಸುವರು ಯಾರು? ಎಂಬ ಲೆಕ್ಕಾಚಾರ ಶುರುವಾಗಿದೆ.
ಅಂತಿಮ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದ್ದು, ಎರಡು ತಂಡಗಳು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿವೆ. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ, ಬರ್ಮಿಂಗ್ಹ್ಯಾಮ್ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಬಹುತೇಕ ಕಡಿಮೆ ಇದೆ. ಇದೇ ಕಾರಣದಿಂದ ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಯಾರ ನಾಯಕತ್ವದಲ್ಲಿ ಮುನ್ನಡೆಯಲಿದೆ ಎಂಬ ನಿರೀಕ್ಷೆ ಶುರುವಾಗಿದೆ.

ಈ ಹಿಂದೆ ರೋಹಿತ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗುತ್ತಿದ್ದ ಕೆ.ಎಲ್.ರಾಹುಲ್ ಸಹ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಜತೆಗೆ ಅಜಿಂಕ್ಯಾ ರಹಾನೆ ಸಹ ಈ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಲಿಲ್ಲ. ಹೀಗಾಗಿ ಟೀಂ ಇಂಡಿಯಾದ ನಾಯಕತ್ವ ಯಾರ ಹೆಗಲಿಗೆ ಬೀಳಲಿದೆ ಎಂಬ ಸಹಜ ಕುತೂಹಲ ಎಲ್ಲರನ್ನ ಕಾಡುತ್ತಿದೆ. ಈ ನಡುವೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೇ ತಂಡವನ್ನ ಮುನ್ನಡೆಸುತ್ತಾರೆ ಎನ್ನಲಾಗುತ್ತಿದೆ. ಈ ಹಿಂದೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭ ವಿರಾಟ್ ಕೊಹ್ಲಿ ಅವರೇ ತಂಡವನ್ನ ಮುನ್ನಡೆಸಿದ್ದರು. ಇದೇ ಕಾರಣಕ್ಕೆ ಸರಣಿಯ ಕೊನೆ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅವರೇ ತಂಡವನ್ನು ಮುನ್ನಡೆಸುತ್ತಾರೆ ಎನ್ನಲಾಗುತ್ತಿದೆ.
ಒಂದೊಮ್ಮೆ ಇದಕ್ಕೆ ವಿರಾಟ್ ಕೊಹ್ಲಿ ಒಪ್ಪದಿದ್ದಲ್ಲಿ ಮುಂದೆ ಆಯ್ಕೆ ಯಾರು? ಎಂಬ ಪ್ರಶ್ನೆಯೂ ಕಾಡುತ್ತಿದೆ. ಸದ್ಯ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿರುವ ತಂಡದಲ್ಲಿ ಅನುಭವಿ ಆಟಗಾರರಾದ ಚೇತೇಶ್ವರ್ ಪುಜಾರ, ಜಸ್ಪ್ರೀತ್ ಬುಮ್ರ ಅವರುಗಳಿದ್ದು, ಇವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗುವುದೇ? ಎಂಬ ಅನುಮಾನ ಇದೆ. ಇವೆಲ್ಲದರ ನಡುವೆ ತವರಿನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದ ರಿಷಬ್ ಪಂತ್ ಅವರಿಗೆ ಕ್ಯಾಪ್ಟನ್ ಜವಾಬ್ದಾರಿ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಈ ಆಟಗಾರರಿಗೆ ನಾಯಕತ್ವದಲ್ಲಿ ಹೆಚ್ಚಿನ ಅನುಭವ ಇಲ್ಲದಿರುವುದರಿಂದ ಬಿಸಿಸಿಐ ಯಾರ ಹೆಗಲಿಗೆ ಕ್ಯಾಪ್ಟನ್ ಜವಾಬ್ದಾರಿ ನೀಡುತ್ತದೆ ಎಂಬುದು ಕ್ಯೋಟ್ಯಾಂತರ ಕ್ರಿಕೆಟ್ ಫ್ಯಾನ್ಸ್‌ಗಳಲ್ಲಿ ಕುತೂಹಲ ಮೂಡಿಸಿದೆ.