ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಕೋವಿಡ್-19 ಸೋಂಕಿಗೆ ತುತ್ತಾಗಿರುವ ಬೆನ್ನಲ್ಲೇ ಎಚ್ಚೆತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತೀಯ ಆಟಗಾರರ ಸಾರ್ವಜನಿಕ ಸ್ಥಳಗಳಲ್ಲಿನ ಸುತ್ತಾಟಕ್ಕೆ ಬ್ರೇಕ್ ಹಾಕಿದೆ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಆರಂಭದ ಬೆನ್ನಲ್ಲೇ ರೋಹಿತ್ ಶರ್ಮ ಕೋವಿಡ್ ಸೋಂಕಿಗೆ ಗುರಿಯಾಗಿರುವುದು ಟೀಂ ಇಂಡಿಯಾಕ್ಕೆ ಹಿನ್ನಡೆ ಮೂಡಿಸಿದೆ. ಈ ಬಾರಿಯ ಪ್ರವಾಸದಲ್ಲಿ ಇಂಗ್ಲೆಂಡ್‌ನಲ್ಲಿ ಬಯೋ ಬಬಲ್ ಹಾಗೂ ಐಸೋಲೇಷನ್ ನಿಯಮಗಳನ್ನ ತೆರವುಗೊಳಿಸಿದೆ. ಇದೇ ಕಾರಣದಿಂದಾಗಿ ಆಟಗಾರರು ಕೋವಿಡ್-19 ಸೋಂಕಿನಿಂದ ತಮ್ಮನ್ನು ಸಂಪೂರ್ಣವಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿರುವ ಭಾರತದ ಆಟಗಾರರು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಸುತ್ತಾಟ ನಡೆಸಿದ್ದರು.

ಆದರೆ ರೋಹಿತ್ ಶರ್ಮಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಟಗಾರರ ಓಡಾಟಕ್ಕೆ ಬಿಸಿಸಿಐ ಕಡಿವಾಣ ಹಾಕಿದೆ ಎನ್ನಲಾಗುತ್ತಿದೆ. ಕೆಲವು ಆಟಗಾರರು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿ ಜನರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಬಿಸಿಸಿಐ ಕೆಲವು ಆಟಗಾರರನ್ನ ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಅಲ್ಲದೇ ಆಟಗಾರರು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡದಂತೆಯೂ ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆಯನ್ನ ಸಹ ನೀಡಿದೆ ಎನ್ನಲಾಗಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿರುವ ಟೀಂ ಇಂಡಿಯಾದ ಪರ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಇನ್ನಿತರ ಪ್ಲೇಯರ್‌ಗಳು ಜನನಿಬಿಡ ಪ್ರದೇಶಗಳಲ್ಲಿ ಸುತ್ತಾಡಿ, ಫ್ಯಾನ್ಸ್‌ಗಳ ಜೊತೆಗೆ ಫೋಟೋ ತೆಗೆಸಿಕೊಂಡಿದ್ದರು. ಇದೆಲ್ಲವನ್ನ ಗಂಭೀರವಾಗಿ ಗಮನಿಸಿದ ಬಿಸಿಸಿಐ ಆಟಗಾರರ ಆರೋಗ್ಯದ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.