ಇದು ಅಕ್ಷರಷಃ ಐಪಿಎಲ್ನ ಸೂಪರ್ ಮ್ಯಾಚ್ ಆಗುವುದರಲ್ಲಿ ಸಂಶಯವಿಲ್ಲ. ಲೆಕ್ಕಾಚಾರದಲ್ಲೂ ಈ ಪಂದ್ಯಕ್ಕೆ ತನ್ನದೇ ಮಹತ್ವ ಇದೆ. ಮೈದಾನದಲ್ಲೂ ರಣರೋಚಕತೆ ಇದೆ. ಹೀಗಾಗಿ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಈ ಸಮರ ಕದನ ಕುತೂಹಲ ಕೆರಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಲಾ 11 ಪಂದ್ಯಗಳನ್ನು ಆಡಿವೆ. ರಾಯಲ್ಸ್ 7 ಪಂದ್ಯಗಳನ್ನು ಗೆದ್ದು 14 ಅಂಕ ಸಂಪಾದನೆ ಮಾಡಿದರೆ, ಡೆಲ್ಲಿ ಕ್ಯಾಪಿಟಲ್ಸ್ 5 ಪಂದ್ಯವನ್ನು ಮಾತ್ರ ಗೆದ್ದು 10 ಅಂಕ ಪಡೆದಿದೆ. ಡೆಲ್ಲಿ ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ-ಆಫ್ ಸ್ಥಾನ ನಿರಾಂತಕವಾಗಿರುತ್ತದೆ. ರಾಯಲ್ಸ್ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ ಮಾತ್ರ ಪ್ಲೇ-ಆಫ್ ಸ್ಥಾನ ಗಟ್ಟಿ ಅನ್ನುವ ಹಾಗಿರುತ್ತದೆ. ಹೀಗಾಗಿ ಡೆಲ್ಲಿ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾದರೆ, ರಾಯಲ್ಸ್ಗೆ ಇದು ಟೆಸ್ಟಿಂಗ್ ಮ್ಯಾಚ್.
ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 91 ರನ್ ಗಳ ಹೀನಾಯ ಸೋಲು ಕಂಡರೂ ಪಾಸಿಟಿವ್ ನೆಟ್ ರನ್ ರೇಟ್ ಮೈಂಟೇನ್ ಮಾಡಿದೆ. ಡೆಲ್ಲಿ 3 ಪಂದ್ಯಗಳನ್ನು ಗೆದ್ದೆರೆ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ತಂಡಗಳಿಗಿಂತ ಮುಂದೆ ಇರಲಿದೆ. ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಆಧಾರವಾಗಿದ್ದಾರೆ. ಪೃಥ್ವಿ ಷಾ ಫಿಟ್ ಆದರೆ ಕೆ.ಎಸ್.ಭರತ್ ಹೊರಗೆ ಕೂರಬೇಕಾಗುತ್ತದೆ. ಮಿಚೆಲ್ ಮಾರ್ಷ್, ನಾಯಕ ರಿಷಬ್ ಪಂತ್ ಮತ್ತು ರೋವ್ಮನ್ಪೊವೆಲ್ ಮಧ್ಯಮ ಸರದಿಯ ಹೊಣೆ ಹೊರಬೇಕಾಗುತ್ತದೆ. ರಿಪಲ್ ಪಟೇಲ್ ಬದಲು ಲಲಿತ್ ಯಾದವ್ ಅವಕಾಶ ಪಡೆಯಬಹುದು. ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ಗೆ ಬ್ಯಾಟಿಂಗ್ ತಾಕತ್ತು ಇದೆ. ಬೌಲಿಂಗ್ ನಲ್ಲಿ ಅನ್ರಿಚ್ ನೋರ್ಟ್ಜೆ, ಖಲೀಲ್ ಅಹ್ಮದ್ ಮತ್ತು ಶಾರ್ದೂಲ್ ವೇಗದ ಬೌಲರ್ಗಳು. ಅಕ್ಸರ್ ಮತ್ತು ಕುಲ್ ದೀಪ್ ಸ್ಪಿನ್ನರ್ ಗಳು. ಮಿಚೆಲ್ ಮಾರ್ಷ್ ಮತ್ತು ಲಲಿತ್ ಯಾದವ್ ಕೂಡ ಬೌಲಿಂಗ್ ಮಾಡಬಲ್ಲರು.
ರಾಜಸ್ಥಾನ ರಾಯಲ್ಸ್ ತಂಡಕ್ಕೆ ಶಿಮ್ರನ್ ಹೆಟ್ಮಯರ್ ಸೇವೆ ಅಲಭ್ಯವಾಗಿದೆ. ಹೀಗಾಗಿ ರಾಸಿ ವ್ಯಾಂಡರ್ ಡ್ಯುಸನ್, ಜಿಮ್ಮಿ ನೀಶಾಮ್ ನಡುವೆ ಈ ಸ್ಥಾನಕ್ಕೆ ಫೈಟ್ ನಡೆಯುತ್ತಿದೆ. ಉಳಿದಂತೆ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ತಂಡದ ಬ್ಯಾಟಿಂಗ್ ಆಧಾರಗಳು. ರಿಯಾನ್ ಪರಾಗ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅಶ್ವಿನ್ ಕೂಡ ಬ್ಯಾಟಿಂಗ್ ಮಾಡಬಲ್ಲರು.
ರಾಜಸ್ಥಾನದ ಬೌಲಿಂಗ್ ದಾಳಿಗೆ ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಬಲ ತುಂಬಿದ್ದಾರೆ. ಅಶ್ವಿನ್ ಸೈಲೆಂಟ್ ಕಿಲ್ಲರ್. ಯಜುವೇಂದ್ರ ಚಹಲ್ ವಿಕೆಟ್ ಬೇಟೆಯ ಮೂಡ್ ನಲ್ಲಿದ್ದಾರೆ. ಕುಲ್ ದೀಪ್ ಸೇನ್ 5ನೇ ಬೌಲರ್.
ಡಿ.ವೈ ಪಾಟೀಲ್ ಮೈದಾನದ ಪಿಚ್ ವಿಭಿನ್ನವಾಗಿ ವರ್ತಿಸಲು ಆರಂಭಿಸಿದೆ. ಮೊದಲು ಬ್ಯಾಟಿಂಗ್ ಮಾಡಿದವರಿಗೆ ಅನುಕೂಲ ಎಂದಾದರೂ ದೊಡ್ಡ ಮೊತ್ತವನ್ನು ಸೇಫ್ ಮಾಡಿಕೊಳ್ಳಬೇಕಾದರೆ ಬೌಲರ್ ಗಳ ಕೊಡುಗೆ ಬೇಕೇ ಬೇಕು.