ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದು ಗೆದ್ದವರ ನಡುವಿನ ಕದನ. ಮೊದಲ ಪಂದ್ಯದಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೊಸ ತಂಡ ಗುಜರಾತ್ ಟೈಟಾನ್ಸ್ ನಡುವೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯಲಿದೆ.
ಎರಡೂ ತಂಡಗಳ ಮೊದಲ ಪಂದ್ಯದ ಗೆಲುವು ಅಂದುಕೊಂಡ ಹಾಗೇ ಬಂದಿರಲಿಲ್ಲ. ಡೆಲ್ಲಿ ಮುಂಬೈ ವಿರುದ್ಧ ಕೆಳ ಸರದಿಯ ಆಟಗಾರರ ಸ್ಪೋಟಕ ಬಲದಿಂದ ಗೆದ್ದಿದ್ದರೆ, ಗುಜರಾತ್ ಲಖನೌ ವಿರುದ್ಧ ಕೊನೆಯ ಓವರ್ನಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಎರಡೂ ತಂಡಗಳು ಮೊದಲ ಪಂದ್ಯದಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿವೆ.
ಡೆಲ್ಲಿ ತಂಡ ಬದಲಾವಣೆ ಮಾಡಿಕೊಳ್ಳಬೇಕಿದೆ. ಡೇವಿಡ್ ವಾರ್ನರ್ ವಾಪಾಸಗಿರುವುದರಿಂದ ಪೃಥ್ವಿ ಷಾ ಜೊತೆ ಆಟಕ್ಕಿಳಿಯುವುದು ಬಹುತೇಕ ಖಚಿತ. ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಸಾರಥಿ ಯಶ್ ಧುಲ್ ಮನ್ ದೀಪ್ಸಿಂಗ್ ಜಾಗದಲ್ಲಿ ಆಡಲಿದ್ದಾರೆ. ನಾಯಕ ರಿಷಬ್ ಪಂತ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ರೋಮ್ವನ್ ಪೊವೆಲ್ ಫಾರಿನ್ ಕೋಟಾದ 2ನೇ ಆಟಗಾರನಾಗಿ 5ನೇ ಕ್ರಮಾಂದಲ್ಲಿ ಆಡಲಿದ್ದಾರೆ. ಲಲಿತ್ ಯಾದವ್ ಮತ್ತು ಅಕ್ಸರ್ ಪಟೇಲ್ 6 ಮತ್ತು 7ನೇ ಕ್ರಮಾಂಕದ ಜವಾಬ್ದಾರಿ ತೆಗೆದುಕೊಂಡು ಬೌಲಿಂಗ್ನಲ್ಲೂ ಕೈಚಳಕ ತೋರಲಿದ್ದಾರೆ.
ಶಾರ್ದೂಲ್ 8ನೇ ಕ್ರಮಾಂಕದ ಬ್ಯಾಟಿಂಗ್ ಜೊತೆ ವೇಗದ ಬೌಲಿಂಗ್ಗೆ ಶಕ್ತಿ ತುಂಬಲಿದ್ದಾರೆ. ಫಾರಿನ್ ಕೋಟಾದ 3ನೇ ಆಟಗಾರ ಲುಂಗಿ ಎನ್ಗಿಡಿ ಹೊಸ ಚೆಂಡು ಹಂಚಿಕೊಳ್ಳಬಹುದು. ಕಮಲೇಶ್ ನಾಗರ್ ಕೋಟಿ ಜಾಗದಲ್ಲಿ ಚೇತನ್ ಸಕಾರಿಯಾ ಆಡಬಹುದು. ಕುಲ್ದೀಪ್ ಯಾದವ್ ಸ್ಪಿನ್ ವಿಭಾಗಕ್ಕೆ ಹೆಚ್ಚು ಬಲ ನೀಡುವುದು ಖಚಿತ.
ಇನ್ನು ಗುಜರಾತ್ ತಂಡ ಬ್ಯಾಟಿಂಗ್ನಲ್ಲಿ ಪುಟಿದೇಳಬೇಕಿದೆ. ಶುಭ್ಮನ್ ಗಿಲ್ ಮತ್ತು ಮ್ಯಾಥ್ಯೂವೇಡ್ ಆರಂಭದಲ್ಲೇ ರನ್ ಶಿಖರ ಕಟ್ಟಬೇಕಿದೆ. ಆಲ್ರೌಂಡರ್ ವಿಜಯ್ ಶಂಕರ್ ಬ್ಯಾಟ್ನಿಂದ ದೊಡ್ಡ ಮೊತ್ತದ ನಿರೀಕ್ಷೆ ಇದೆ. ನಾಯಕ ಹಾರ್ದಿಕ್ ಪಾಂಡ್ಯಾ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಮತ್ತು ಅಭಿನವ್ ಮನೋಹರ್ ಫೈನಲ್ ಟಚ್ ಕೊಡಬಲ್ಲರು. ಸ್ಪಿನ್ನರ್ ರಶೀದ್ ಖಾನ್, ವೇಗಿ ಮೊಹಮ್ಮದ್ ಶಮಿ ಟ್ರಂಪ್ ಕಾರ್ಡ್ ಬೌಲರ್ಗಳು. ಇವರಿಗೆ ಸಾಥ್ ನೀಡಲು ಲೊಕೊ ಫರ್ಗೂಸನ್ ಮತ್ತು ಡೊಮಿನಿಕ್ ಡ್ರೇಕ್ಸ್ ಸಜ್ಜಾಗುತ್ತಿದ್ದಾರೆ.
ಪುಣೆಯ ಪಿಚ್ ಕಂಡೀಷ್ಗಿಂತ ಪಂದ್ಯದ ವೇಳೆ ಬೀಳುವ ಮಂಜು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಟಾಸ್ ಗೆದ್ದವರು ಮೊದಲು ಫೀಲ್ಡಿಂಗ್ ಆರಿಸಿಕೊಳ್ಳುವುದು ಖಚಿತ