ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ಹೀನಾಯ ಸೋಲು ಕಂಡಿದೆ. 17ನೇ ಶ್ರೇಯಾಂಕದ ಜಪಾನ್ ವಿರುದ್ಧ 5- 2 ಅಂತರದಿಂದ ಭಾರತ ಸೋಲು ಕಂಡಿದೆ. ಇದೀಗ ಮುಂದಿನ ಸುತ್ತಿಗೆ ಹೋಗಲು ಇಂಡೋನೇಷ್ಯಾ ವಿರುದ್ಧ ದೊಡ್ಡ ಗೆಲುವು ದಾಖಲಿಸಬೇಕಿದೆ.
ಅನುಭವಿ ಬಿರೇಂದರ್ ಲಾಕ್ರಾ ನಾಯಕತ್ವದಲ್ಲಿ ಆಡುತ್ತಿರುವ ಭಾರತ ತಂಡ ಮಂಗಳವಾರ ಜಕಾರ್ತದಲ್ಲಿ ರಕ್ಷಣಾತ್ಮಕ ಆರಂಭವನ್ನು ಮಾಡಿ, ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ನೀಡಲಿಲ್ಲ.

ಎರಡನೇ ಕ್ವಾರ್ಟರ್‌ನ 23ನೇ ನಿಮಿಷದಲ್ಲಿ ಕಿನ್ ನಾಗಯೋಶಿ ಪೆನಾಲ್ಟಿ ಲಾಭ ಪಡೆದು ಬೀಗಿದರು. ಪರಿಣಾಮ ಜಪಾನ್ 1-0 ಮುನ್ನಡೆಗೆ ಕಾರಣರಾದರು. ಈ ಕ್ವಾರ್ಟರ್‌ನಲ್ಲಿ ದಾಖಲಾದ ಏಕೈಕ ಗೋಲು ಇದಾಗಿದೆ. ಪಂದ್ಯದ ಮೂರನೇ ಕ್ವಾರ್ಟರ್ ಕೂಡ ಜಪಾನ್ ಹೆಸರಲ್ಲಿ ಉಳಿಯಿತು. ಕವಾಬೆ ಕೊಸಾಯ್ 39ನೇ ನಿಮಿಷದಲ್ಲಿ ಫೀಲ್ಡ್ ಗೋಲ್ ಮೂಲಕ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಟೀಂ ಇಂಡಿಯಾ ಹಲವಾರು ಬಾರಿ ಪುಟಿದೇಳುವ ಪ್ರಯತ್ನಗಳನ್ನು ಮಾಡಿತು. ಆದರೆ 44ನೇ ನಿಮಿಷದಲ್ಲಿ ಮಹತ್ವದ ಮುನ್ನಡೆ ಲಭಿಸಿತು. ಪವನ್ ರಾಜ್‌ಭರ್ ಫೀಲ್ಡ್ ಗೋಲು ಗಳಿಸಿದರು.
ಪಂದ್ಯದ ಕೊನೆಯ ಕ್ವಾರ್ಟರ್ ಸಂಪೂರ್ಣವಾಗಿ ಜಪಾನ್ ಹೆಸರಿನಲ್ಲಿತ್ತು. ಓಕಾ ರೋಮಾ 48ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿ ಸ್ಕೋರ್ 3-1ಕ್ಕೆ ಏರಿಸಿದರು. ನಂತರದ ನಿಮಿಷದಲ್ಲಿ ಉತ್ತಮ್ ಸಿಂಗ್ ಅದ್ಭುತ ಗೋಲು ಬಾರಿಸಿ ಸ್ಕೋರ್ 3-2ರ ಇಳಿಸಿದರು. ಜಪಾನ್ ತಂಡದ ಕೊಜಿ ಯಮಸಾಕಿ 53ನೇ ನಿಮಿಷದಲ್ಲಿ ಗೋಲು ಗಳಿಸಿದರು. ನಂತರ 55ನೇ ನಿಮಿಷದಲ್ಲಿ ಕವಾಬೆ ಕೊಸಾಯ್ ತಮ್ಮ ಎರಡನೇ ಹಾಗೂ ತಂಡದ ಐದನೇ ಗೋಲು ದಾಖಲಿಸಿದರು. ಈ ಗೋಲಿನ ನಂತರ, ಭಾರತ ಗೋಲು ಬಾರಿಸುವ ಆಸೆ ಫಲಿಸಲಿಲ್ಲ.
ಈ ಟೂರ್ನಿಯಲ್ಲಿ ಹಾಕಿ ಇಂಡಿಯಾ ತನ್ನ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ನಿರ್ಧರಿಸಿದೆ. ಟೋಕಿಯೊ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ತಂಡದ ಅನೇಕ ತಾರೆಗಳು ಏಷ್ಯಾಕಪ್ ಆಡುವ ತಂಡದ ಭಾಗವಾಗಿಲ್ಲದಿರುವುದು ಇದೇ ಕಾರಣ.
ಪಾಕಿಸ್ತಾನವು ಇಂಡೋನೇಷ್ಯಾವನ್ನು 13-0 ಅಂತರದಿಂದ ಸೋಲಿಸಿತು. ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಮೇ 26 ಗುರುವಾರ ಸಂಜೆ 5:00 ರಂದು ಆಡಲಿದೆ.
Indian Men’s Hockey Hero Asia Cup