ಢಾಕಾ: ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ಭಾರತ 6-0 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸುವ ಮೂಲಕ ತನ್ನ ಆಕರ್ಷಕ ಪ್ರದರ್ಶನವನ್ನು ಮುಂದುವರೆಸಿದೆ.
ಹಿಂದಿನ ಪಂದ್ಯದಲ್ಲಿ 2 ಗೋಲು ಬಾರಿಸಿದ್ದ ಹರ್ಮನ್ಪ್ರೀತ್ ಸಿಂಗ್ ಈ ಪಂದ್ಯದಲ್ಲೂ ಎರಡು ಗೋಲು ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಈ ಟೂರ್ನಿಯಲ್ಲಿ ಭಾರತ ತಂಡಕ್ಕೆ ಇದು ಸತತ ಮೂರನೇ ಗೆಲುವಾಗಿದೆ.
ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಜಪಾನ್ ವೇಗವಾಗಿ ಪ್ರತಿದಾಳಿ ನಡೆಸಿತು, ಆದರೆ ಟೀಮ್ ಇಂಡಿಯಾ ಜಪಾನ್ ದಾಳಿಯನ್ನು ತಡೆಯೊಡ್ಡುವಲ್ಲಿ ಸಫಲವಾಯಿತು. ಎರಡನೇ ಕ್ವಾರ್ಟರ್ ನಲ್ಲೂ ಟೀಮ್ ಇಂಡಿಯಾ ವೇಗವಾಗಿ ಆರಂಭಿಸಿತು. ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಗಳಿಸಲು ಜಪಾನ್ಗೆ ಅವಕಾಶ ಸಿಕ್ಕಿದರೂ, ಈ ಅವಕಾಶದಲ್ಲಿ ಗೋಲ್ ಬಾರಿಸುವಲ್ಲಿ ಎಡವಿತು.
ಟೀಮ್ ಇಂಡಿಯಾ ಪರ ದಿಲ್ ಪ್ರೀತ್ ಸಿಂಗ್ 23ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿ ಭಾರತಕ್ಕೆ 2-0 ಮುನ್ನಡೆ ನೀಡಿದರು.
ಮೂರನೇ ಕ್ವಾರ್ಟರ್ನಲ್ಲಿ ಜರ್ಮನ್ಪ್ರೀತ್ ಸಿಂಗ್ ಪಂದ್ಯದ 34 ನೇ ನಿಮಿಷದಲ್ಲಿ ಅತ್ಯುತ್ತಮ ತಂತ್ರವನ್ನು ಪ್ರದರ್ಶಿಸಿದರು ಮತ್ತು ಫೀಲ್ಡ್ ಗೋಲು ಗಳಿಸಿ ಭಾರತಕ್ಕೆ 3-0 ಮುನ್ನಡೆ ತಂದುಕೊಟ್ಟರು. ಪಂದ್ಯದ 46ನೇ ನಿಮಿಷದಲ್ಲಿ ಜಪಾನ್ ವಿರುದ್ಧ ಸುಮಿತ್ ಗೋಲು ಬಾರಿಸಿದರು. ಪಂದ್ಯದ ಅಂತ್ಯಕ್ಕೆ ಏಳು ನಿಮಿಷಗಳ ಮೊದಲು, ಹರ್ಮನ್ಪ್ರೀತ್ ಸಿಂಗ್ ಅದ್ಭುತ ಗೋಲು ಗಳಿಸಿದರು. ಈ ಗೋಲಿನ ಒಂದು ನಿಮಿಷದ ನಂತರ, ಶಂಶೇರ್ ಸಿಂಗ್ ಪಂದ್ಯದಲ್ಲಿ ಭಾರತಕ್ಕಾಗಿ ತಮ್ಮ ಮೊದಲ ಮತ್ತು ಆರನೇ ಗೋಲು ಗಳಿಸಿದರು. ಭಾರತ ತಂಡ ಜಪಾನ್ಗೆ ಪಂದ್ಯಕ್ಕೆ ಮರಳುವ ಅವಕಾಶ ನೀಡದೆ ಸುಲಭ ಜಯ ದಾಖಲಿಸಿತು.