Deepak Chahar- ತೂಗುಯ್ಯಾಲೆಯಲ್ಲಿದೆ ದೀಪಕ್ ಚಾಹರ್ ಕ್ರಿಕೆಟ್ ಭವಿಷ್ಯ…?

ಟೀಮ್ ಇಂಡಿಯಾದ ಟಿ-20 ಸ್ಪೇಷಲಿಸ್ಟ್ ದೀಪಕ್ ಚಾಹರ್ ಅವರು ಇನ್ನು ಕೂಡ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಟೀಮ್ ಇಂಡಿಯಾವನ್ನು ಮತ್ತೆ ಸೇರಿಕೊಳ್ಳಲು ಕನಿಷ್ಠ 4ರಿಂದ ಐದು ವಾರ ಕಾಯಲೇಬೇಕು.
ಸದ್ಯ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ದೀಪಕ್ ಚಾಹರ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವೆಸ್ಟ್ ಇಂಡೀಸ್ ಸರಣಿಯ ವೇಳೆ ದೀಪಕ್ ಚಾಹರ್ ಅವರು ಗಾಯಗೊಂಡಿದ್ದರು. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದರು. ಅಲ್ಲದೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗರಿಷ್ಠ ಬೆಲೆಯ ಆಟಗಾರನಾಗಿದ್ರೂ ದೀಪಕ್ ಚಾಹರ್ ಆಡಲು ಸಾಧ್ಯವಾಗಿರಲಿಲ್ಲ.
ಸ್ನಾಯು ಸೆಳೆತದಿಂದ ಬಳಲುತ್ತಿರುವ ದೀಪಕ್ ಚಾಹರ್ ಟಿ-20 ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ. ಜೊತೆಗೆ ಬ್ಯಾಟಿಂಗ್ ನಲ್ಲೂ ಗಮನ ಸೆಳೆಯುತ್ತಿದ್ದ ಆಟಗಾರ.

ಈಗಾಗಲೇ ಎನ್ ಸಿಎ ನಲ್ಲಿರುವ ದೀಪಕ್ ಚಾಹರ್ ಅವರು ಲಘುವಾಗಿ ಅಭ್ಯಾಸದಲ್ಲೂ ನಿರತರಾಗಿದ್ದಾರೆ. ಬೆಳಗ್ಗಿನ ಅವಧಿಯಲ್ಲಿ ನಾಲ್ಕರಿಂದ ಐದು ಓವರ್ ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ.
ನಾನು ಪ್ರತಿ ದಿನ ಬೆಳಗ್ಗೆ ನಾಲ್ಕರಿಂದ ಐದು ಓವರ್ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದೇನೆ. ಸ್ನಾಯು ಸೆಳೆತದಿಂದ ನಿಧಾನವಾಗಿ ಗುಣಮುಖನಾಗುತ್ತಿದ್ದೇನೆ. ಮುಂದಿನ ನಾಲ್ಕರಿಂದ ಐದು ವಾರಗಳಲ್ಲಿ ನಾನು ಸಂಪೂರ್ಣವಾಗಿ ಫಿಟ್ ಆಗುತ್ತೇನೆ ಎಂದು ದೀಪಕ್ ಚಾಹರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದ್ರೆ ಜುಲೈ 2ನೇ ವಾರದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಆಡುವುದು ಅನುಮಾನವಾಗಿದೆ ಎಂದು ಕೂಡ ದೀಪಕ್ ಚಾಹರ್ ಹೇಳಿದ್ದಾರೆ.
ನಾನು ನಿಧಾನವಾಗಿ ಚೇತರಿಕೆ ಪಡೆದುಕೊಳ್ಳುತ್ತಿದ್ದೇನೆ. ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗೆ ಫಿಟ್ ಆಗುತ್ತೇನೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಒಂದು ಬಾರಿ ನಾನು ಸಂಪೂರ್ಣವಾಗಿ ಫಿಟ್ ಆದ ನಂತರ ಕೆಲವೊಂದು ಕ್ಲಬ್ ಪಂದ್ಯಗಳನ್ನು ಆಡುತ್ತೇನೆ. ಯಾಕಂದ್ರೆ ನನ್ನ ಫಿಟ್ ನೆಸ್ ಅನ್ನು ಕೂಡ ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಗೂ ಲಭ್ಯನಾಗುತ್ತೇನೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ದೀಪಕ್ ಚಾಹರ್ ಹೇಳಿದ್ದಾರೆ. Deepak Chahar-rehab to continue for another month at NCASource

ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ಬಳಿಕ ಜುಲೈ 22ರಿಂದ ಆಗಸ್ಟ್ 7ರವರೆಗೆ ವೆಸ್ಟ್ ಇಂಡೀಸ್ ವಿರುದ್ಧವೂ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಟೀಮ್ ಇಂಡಿಯಾ ಆಡಲಿದೆ.
ಇದೇ ವೇಳೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಟೀಮ್ ಇಂಡಿಯಾದ ವೇಗಿ ಟಿ. ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಷಿಂಗ್ಟನ್ ಸುಂದರ್ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ಕೌಂಟಿ ತಂಡದ ಪರ ಆಡಲಿದ್ದಾರೆ.