Team india – ರೋಹಿತ್ ಬಳಗಕ್ಕೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕ್ಲಾಸ್..!

ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾದ ಟೆಸ್ಟ್ ತಂಡ ಇದೀಗ ಇಂಗ್ಲೆಂಡ್ ನೆಲದಲ್ಲಿ ತಾಲೀಮ್ ನಡೆಸುತ್ತಿದೆ.
ಜುಲೈ 1ರಿಂದ 5ರವರೆಗೆ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯ ಕಳೆದ ವರ್ಷ ರದ್ದುಗೊಂಡಿರುವ ಟೆಸ್ಟ್ ಪಂದ್ಯವಾಗಿದೆ. ಕಳೆದ ವರ್ಷ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು. ಆದ್ರೆ ಕೋವಿಡ್ ನಿಂದಾಗಿ ಕಡೆಯ ಟೆಸ್ಟ್ ಪಂದ್ಯ ರದ್ದುಗೊಂಡಿತ್ತು. ಹೀಗಾಗಿ ಆ ಪಂದ್ಯವನ್ನು ಈಗ ಆಯೋಜನೆ ಮಾಡಲಾಗುತ್ತಿದೆ.
ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ನಲ್ಲಿದ್ದು, ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಜೂನ್ 16ರಂದು ಟೀಮ್ ಇಂಡಿಯಾದ ಮೊದಲ ಬ್ಯಾಚ್ ನ ಆಟಗಾರರು ಇಂಗ್ಲೆಂಡ್ ಗೆ ತೆರಳಿದ್ದರು. ಆನಂತರ ನಾಯಕ ರೋಹಿತ್ ಶರ್ಮಾ ತೆರಳಿದ್ದರು. ಬಳಿಕ ದಕ್ಷಿಣ ಆಫ್ರಿಕಾ ಸರಣಿಯ ನಂತರ ಹೆಡ್ ಕೋಚ್ ರಾಹುಲ್ ದ್ರಾವಿಡ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಕೂಡ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದ್ದರು.

ಇದೀಗ ಟೀಮ್ ಇಂಡಿಯಾ ಟೆಸ್ಟ್ ಆಟಗಾರರಿಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಟೆಸ್ಟ್ ಸರಣಿಗೆ ಮುನ್ನ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಕ್ಕು ಮುನ್ನ ರೋಹಿತ್ ಬಳಗದ ಜೊತೆ ರಾಹುಲ್ ದ್ರಾವಿಡ್ ಮಾತುಕತೆ ಕೂಡ ನಡೆಸಿದ್ದಾರೆ. ಅಭ್ಯಾಸದ ವೇಳೆ ಟೀಮ್ ಇಂಡಿಯಾ ಆಟಗಾರರಿಗೆ ಕೆಲವೊಂದು ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದಾರೆ.
ಅಂದ ಹಾಗೇ ಟೀಮ್ ಇಂಡಿಯಾ ಟೆಸ್ಟ್ ಆಟಗಾರರ ಜೊತೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮಾತುಕತೆ ನಡೆಸುತ್ತಿರುವ ಫೋಟೋಗಳನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದೆ. Team india Head Coach Rahul Dravid speaks to the players at a training session
ಇನ್ನು ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರಿಗೆ ಇದು ಮೊದಲ ವಿದೇಶಿ ಪ್ರವಾಸವಾಗಿದೆ. ಏಕೈಕ ಟೆಸ್ಟ್ ಪಂದ್ಯವನ್ನು ಗೆಲ್ಲುವುದಲ್ಲದೇ, ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿಯನ್ನು ಗೆಲ್ಲುವುದು ಕೂಡ ಟೀಮ್ ಇಂಡಿಯಾದ ಗುರಿಯಾಗಿದೆ.
ರಾಹುಲ್ ದ್ರಾವಿಡ್ ಹೆಡ್ ಕೋಚ್ ಆದ ನಂತರ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈಗಾಗಲೇ ಆರು ಮಂದಿ ನಾಯಕರು ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಹೊಸ ಹೊಸ ಪ್ರಯೋಗಳು ಕೂಡ ನಡೆಯುತ್ತಿವೆ. ಬಲಿಷ್ಠ ತಂಡವನ್ನು ಕಟ್ಟುವ ಉದ್ದೇಶ ಹೊಂದಿರುವ ರಾಹುಲ್ ದ್ರಾವಿಡ್‍ಗೆ ರೋಹಿತ್ ಬಳಗ ಯಾವ ರೀತಿಯ ಪ್ರದರ್ಶನ ನೀಡುತ್ತೆ ಅನ್ನೋದು ಕೂಡ ಮುಖ್ಯವಾಗಿದೆ.