ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಗೆ ತಯಾರಿ ಆರಂಭಿಸಿದೆ. ಆಟಗಾರರ ಹರಾಜಿನಲ್ಲಿ ದುಬಾರಿ ಮೊತ್ತ ಕೊಟ್ಟು ಆಟಗಾರರನ್ನು ಖರೀದಿ ಮಾಡಿದೆ. ಸೂರತ್ ನಲ್ಲಿ ಅಭ್ಯಾಸ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ಗೆ ಆಟ ಅರಂಭಿಸುವ ಮೊದಲೇ ಶಾಕ್ ಎದುರಾಗುವ ಸಾಧ್ಯತೆ ಇದೆ.
ಆಟಗಾರರ ಹರಾಜಿನಲ್ಲಿ ಸಿಎಸ್ಕೆ 14 ಕೋಟಿ ನೀಡಿ ಆಲ್ರೌಂಡರ್ ದೀಪಕ್ ಚಹರ್ ಅವರನ್ನು ಖರೀದಿಸಿತ್ತು. ಆದರೆ ದೀಪಕ್ ಚಹರ್ ಶ್ರೀಲಂಕಾ ವಿರುದ್ಧದ ಟಿ20 ಸರಣಿ ವೇಳೆ ಗಾಯಗೊಂಡಿದ್ದರು. ಚಹರ್ ಫಿಟ್ ನೆಸ್ ರಿಪೋರ್ಟ್ಗಾಗಿ ಸಿಎಸ್ಕೆ ಕಾಯುತ್ತಿದೆ. ಚಹರ್ಗೆ 8 ವಾರಗಳ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗುತ್ತದೆ.
ಇನ್ನೊಂದು ಕಡೆ ಓಪನರ್ ಮತ್ತು ಕಳೆದ ಆವೃತ್ತಿಯ ಆರೇಂಜ್ ಕ್ಯಾಪ್ ಹೋಲ್ಡರ್ ರುತುರಾಜ್ ಗಾಯಕ್ವಾಡ್ ಕೂಡ ಕೆಲ ಪಂದ್ಯಗಳಿಗೆ ಅಲಭ್ಯರಾಗಬಹುದು ಎಂದು ಹೇಳಲಾಗುತ್ತಿದೆ. ಕೈಗೆ ಗಾಯವಾಗಿರುವ ಕಾರಣ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಹಾಲಿ ಚಾಂಪಿಯನ್ ಸಿಎಸ್ಕೆ ಮಾರ್ಚ್ 26 ರಂದು ಕಳೆದ ವರ್ಷದ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆದರೆ ದೀಪಕ್ ಹಾಗೂ ರುತುರಾಜ್ ತಂಡವನ್ನು ಸೇರಿಕೊಳ್ಳದೇ ಇರುವುದು ಸಿಎಸ್ಕೆ ಪಾಳಯದಲ್ಲಿ ಆತಂಕ ಹೆಚ್ಚಿಸಿದೆ.
ದೀಪಕ್ ಚಹರ್ ಮತ್ತು ರುತುರಾಜ್ ಗಾಯಕ್ವಾಡ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಸಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ಭಾರತ ತಂಡದಲ್ಲಿ ಆಡುತ್ತಿರುವುದರಿಂದ ಎನ್ಸಿಎಯಿಂದ ಫಿಟ್ನೆಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕಿದೆ.