ಟೀಂ ಇಂಡಿಯಾದ ಯುವ ಬ್ಯಾಟಿಂಗ್ ಅಸ್ತ್ರ ಶ್ರೇಯಸ್ ಅಯ್ಯರ್ ಹಾಗೂ ನ್ಯೂಜಿ಼ಲೆಂಡ್ ಮಹಿಳಾ ತಂಡದ ಆಲ್ರೌಂಡರ್ ಅಮೆಲಿಯಾ ಕರ್ ಅವರುಗಳು ಐಸಿಸಿ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅದ್ಭುತ ಫಾರ್ಮ್ನಲ್ಲಿರುವ ಶ್ರೇಯಸ್ ಅಯ್ಯರ್, ಫೆಬ್ರವರಿ ತಿಂಗಳಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಈ ಪ್ರದರ್ಶನದಿಂದ ಐಸಿಸಿ ಟಿ20 ಪುರುಷರ ರ್ಯಾಕಿಂಗ್ ಪಟ್ಟಿಯಲ್ಲಿ 27ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 16 ಬಾಲ್ಗಳಲ್ಲಿ 25 ರನ್ಗಳಿಸಿದ್ದ ಶ್ರೇಯಸ್ ಅಯ್ಯರ್, ವಿಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 80 ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನೂ ಶ್ರೀಲಂಕಾ ವಿರುದ್ಧವೂ ಇದೇ ಪ್ರದರ್ಶನ ಮುಂದುವರಿಸಿದ ಶ್ರೇಯಸ್ ಅಯ್ಯರ್, ಸರಣಿಯ ಮೂರು ಟಿ20 ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಬಾರಿಸಿ ಕಮಾಲ್ ಮಾಡಿದ್ದರು. 174ರ ಸ್ಟ್ರೈಕ್ ರೇಟ್ನಲ್ಲಿ 204 ರನ್ಗಳನ್ನ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ಪಡೆದಿದ್ದರು.
ಮಿಂಚಿದ ಅಮೆಲಿಯಾ ಕರ್:
ನ್ಯೂಜಿ಼ಲೆಂಡ್ ಮಹಿಳಾ ತಂಡದ ಆಲ್ರೌಂಡರ್ ಅಮೆಲಿಯಾ ಕರ್, ಐಸಿಸಿ ಫೆಬ್ರವರಿ ತಿಂಗಳ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ. ಐಸಿಸಿ ಮಹಿಳಾ ವಿಶ್ವಕಪ್ ಅಭ್ಯಾಸ ಸರಣಿಯಲ್ಲಿ ಶತಕ ಹಾಗೂ ಅರ್ಧಶತಕದ ಸಹಿತ 117ರ ಸ್ಟ್ರೈಕ್ ರೇಟ್ನಲ್ಲಿ 353 ರನ್ಗಳಿಸಿದ್ದರು. ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗಿದ್ದ ಅಮೆಲಿಯಾ ಕೆರ್, ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದಿದ್ದರು. ಆ ಮೂಲಕ ಕಿವೀಸ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಯಾರೆಲ್ಲಾ ನಾಮಿನೇಟ್ ಆಗಿದ್ದರು
ಐಸಿಸಿಯು ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ʼಪ್ಲೇಯರ್ ಆಫ್ ದಿ ಮಂತ್ʼ ಪ್ರಶಸ್ತಿ ನೀಡಲಿದೆ. ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆರು ಆಟಗಾರರ ಹೆಸರನ್ನು ನಾಮನಿರ್ದೇಶನಗೊಂಡಿತ್ತು. ಪುರುಷರ ವಿಭಾಗದಲ್ಲಿ ಶ್ರೇಯಸ್ ಅಯ್ಯರ್ ಜೊತೆಗೆ ಯುಎಇ ತಂಡದ ವೃತ್ಯ ಅರವಿಂದ್, ಭಾರತದ ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ ಜೊತೆಗೆ ನೇಪಾಳದ ದೀಪೇಂದರ್ ಸಿಂಗ್ ಎರಿ ಅವರು ನಾಮನಿರ್ದೇಶನಗೊಂಡಿದ್ದರು. ಮಹಿಳಾ ವಿಭಾಗದಲ್ಲಿ ಭಾರತದ ಮಿಥಾಲಿ ರಾಜ್, ದೀಪ್ತಿ ಶರ್ಮ ಹಾಗೂ ಅಮೆಲಿಯಾ ಕರ್ ನಾಮಿನೇಟ್ ಆಗಿದ್ದರು.