ಐಪಿಎಲ್ 15ನೇ ಆವೃತ್ತಿಯಲ್ಲಿ ಸೋಲು-ಗೆಲುವಿನ ಮಿಶ್ರ ಫಲಿತಾಂಶ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶುಭ ಸುದ್ದಿ ಕೇಳಿ ಬಂದಿದ್ದು, ಡೆಲ್ಲಿ ತಂಡದ ಸ್ಟಾರ್ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, ಡೆಲ್ಲಿ ತಂಡದ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಇತ್ತೀಚೆಗೆ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿ ಆಡಿದ್ದರು. ಇದೀಗ ಐಪಿಎಲ್ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿರುವ ಡೇವಿಡ್ ವಾರ್ನರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ. ಈಗಾಗಲೇ ಭಾರತಕ್ಕೆ ಆಗಮಿಸಿರುವ ವಾರ್ನರ್, ಸಾಕಷ್ಟು ಪರಿಶ್ರಮ ಮತ್ತು ಅಭ್ಯಾಸ ನಡೆಸಿದ್ದಾರೆ.
ಹೀಗಾಗಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಡೆಲ್ಲಿ ತಂಡದ ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುಜರಾತ್ ವಿರುದ್ಧ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಪ್ರಸಕ್ತ ಐಪಿಎಲ್ನ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಆಟವಾಡಿದ್ದ ಡೆಲ್ಲಿ, ಭರ್ಜರಿ 4 ವಿಕೆಟ್ ಗೆಲುವು ಕಂಡು ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಆದರೆ ಗುಜರಾತ್ ಟೈಟನ್ಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ಪರಿಣಾಮ ಆಘಾತ ಅನುಭವಿಸಿತು. ಆದರೆ ಇದೀಗ ಡೇವಿಡ್ ವಾರ್ನರ್ ಆಗಮನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಲವನ್ನ ಇನ್ನಷ್ಟು ಹೆಚ್ಚಿಸಲಿದೆ.