ಕ್ರೈಸ್ಟ್ಚರ್ಚ್ನ ಹ್ಯಾಂಗ್ಲೆ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಆಗಿ ಮೆರೆದಾಡಿತು. ಮೊದಲು ಅಬ್ಬರದ ಬ್ಯಾಟಿಂಗ್, ನಂತರ ಬೌಲಿಂಗ್ನಲ್ಲಿ ಚುರುಕುತನ ತೋರಿ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಆಸ್ಟ್ರೇಲಿಯಾ ಪರ ಅಲಿಸಾ ಹೀಲಿ ಅಬ್ಬರದ 170 ರನ್ಗಳಿಸಿದರೆ ಇಂಗ್ಲೆಂಡ್ನ ನ್ಯಾಟ್ ಸಿವಿರ್ ಅಜೇಯ 148 ರನ್ಗಳ ಮೂಲಕ ಅಬ್ಬರಿಸಿದರು. ಆಸ್ಟ್ರೇಲಿಯಾ 7ನೇ ಬಾರಿ ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದು ಕುಣಿದಾಡಿತು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಈ ನಿರ್ಧಾರ ತಪ್ಪು ಎಂದು ಸಾಭೀತಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಇಂಗ್ಲೆಂಡ್ ಬೌಲರ್ಗಳನ್ನು ಮನಸ್ಸಿಗೆ ಬಂದ ಹಾಗೆ ದಂಡಿಸಿದ ಆಲಿಸಾ ಹೀಲಿ ಮತ್ತು ರಾಶೆಲ್ ಹೇಯ್ನ್ಸ್ ಮೊದಲ ವಿಕೆಟ್ಗೆ 160 ರನ್ಗಳ ಜೊತೆಯಾಟ ತಂದುಕೊಟ್ಟರು. ಹೀಲಿ ಮತ್ತು ಹೇಯ್ನ್ಸ್ ಇಬ್ಬರೂ ಅರ್ಶಶತಕದ ಗಡಿ ದಾಟಿದರು. ಹೇಯ್ನ್ಸ್ 93 ಎಸೆತಗಳಲ್ಲಿ 68 ರನ್ಗಳಿಸಿ ಸೋಫಿ ಎಕ್ಲಸ್ಟೋನ್ಗೆ ವಿಕೆಟ್ ಒಪ್ಪಿಸಿದರು.
ಹೀಲಿ ಭರ್ಜರಿ ಆಟ ಮುಂದುವರೆಸಿದ್ದರು. ಇವರಿಗೆ ಬೆಥ್ ಮೂನಿ ಸಾಥ್ ನೀಡಿದರು. ವೇಗವಾಗಿ ರನ್ಗಳಿಸಿದ ಈ ಜೋಡಿ ಎಲ್ಲಾ ದಾಖಲೆಗಳನ್ನು ಚಿಂದಿಚೂರು ಮಾಡಿತು. ಅಲಿಸಾ ಹೀಲಿ ಶತಕದ ಸಂಭ್ರಮವನ್ನು ಆಚರಿಸಿಕೊಂಡರು. ಮೂನಿ ಕೂಡ ಅರ್ಧಶತಕದ ಗಡಿ ದಾಟಿದರು. ಶತಕದ ಬಳಿಕ ಹೀಲಿ ಆಟ ವಿಸ್ಪೋಟಕ ಅನ್ನುವ ಹಾಗಿತ್ತು. ನೋಡ ನೋಡುತ್ತಿದ್ದಂತೆ ಹೀಲಿ 150 ರನ್ಗಳ ಗಡಿ ದಾಟಿ ಮುನ್ನಡೆದದದು. 2ನೇ ವಿಕೆಟ್ಗೆ 158 ರನ್ಗಳ ಜೊತೆಯಾಟ ಬಂದಿತ್ತು. ಹೀಲಿ ಕೇವಲ 138 ಎಸೆತಗಳಲ್ಲಿ 26 ಬೌಂಡರಿಗಳ ನೆರವಿನಿಂದ 170 ರನ್ಗಳಿಸಿ ಔಟಾದರು.
ಸ್ಲಾಗ್ ಓವರುಗಳಲ್ಲಿ ಆ್ಯಶ್ ಗಾರ್ಡನರ್ ಮತ್ತು ಮೆಗ್ ಲ್ಯಾನಿಂಗ್ ಬೇಗನೆ ಔಟಾದರು. 47 ಎಸೆತಗಳಲ್ಲಿ 62 ರನ್ಗಳಿಸಿದ್ದ ಮೂನಿ ಆಟವು ಕೊನೆಗೊಂಡಿತ್ತು. ಕೊನೆಯಲ್ಲಿ ತಾಹಿಲ ಮೆಕ್ಗ್ರಾಥ್ (ಅಜೇಯ 8) ಮತ್ತು ಎಲ್ಲಿಸ್ ಪೆರ್ರಿ (ಅಜೇಯ 17) ಉತ್ತಮ ಆಟ ಆಡಿದರು. ನಿಗದಿತ 50 ಓವರುಗಳಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 356 ರನ್ಗಳಿಸಿತು.
ಬೃಹತ್ ಮೊತ್ತದ ಚೇಸಿಂಗ್ಗೆ ಇಳಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಮೆಗಾನ್ ಶಟ್ ಡೇಂಜರಸ್ ಡ್ಯಾನಿ ವ್ಯಾಟ್ (4) ಮತ್ತು ಟಾಮಿ ಬಿಮೌಂಟ್ (27) ವಿಕೆಟ್ ಅನ್ನು ಬೇಗನೆ ಪಡೆದರು. ಹೀದರ್ ನೈಟ್ (26) ಅಲೆನಾ ಕಿಂಗ್ಗೆ ವಿಕೆಟ್ ಒಪ್ಪಿಸಿದರು. ಏಮಿ ಜೋನ್ಸ್ (20), ಸೋಫಿಯಾ ಡಂಕ್ಲಿ (23) ಬೇಗನೆ ಔಟಾದರು. ಕೆಥರಿನ್ ಬ್ರಂಟ್ (1), ಸೋಫಿ ಎಕ್ಲಸ್ಟೋನ್ (3) ಮತ್ತು ಕೇಸ್ ಕ್ರಾಸ್ (2) ಕೂಡ ಬೇಗನೆ ಔಟಾದರು.
ಇದೆಲ್ಲದರ ಮಧ್ಯೆ ಅನುಭವಿ ಆಟಗಾರ್ತಿ ನ್ಯಾಟ್ ಸಿವಿರ್ ಶತಕದ ಸಿಡಿಸಿ ಆಸ್ಟ್ರೇಲಿಯಾ ಬೌಲರ್ಗಳ ಚಳಿ ಬಿಡಿಸಿದರು. ಇನ್ನೊಂದು ಕಡೆಯಲ್ಲಿ ಚಾರ್ಲಿ ಡೀನ್ 21 ರನ್ಗಳಿಸಿ ಸಾಥ್ ನೀಡಿದರು. ಆದರೆ ಆ್ಯಶ್ ಗಾರ್ಡನರ್ ಡೀನ್ ವಿಕೆಟ್ ಕಬಳಿಸಿ ಇಂಗ್ಲೆಂಡ್ಗೆ ಶಾಕ್ ನೀಡಿದರು. ಕೊನೆಯಲ್ಲಿ ಆ್ಯನ್ ಶ್ರಬ್ಸೊಲ್ ಗಾರ್ಡನರ್ಗೆ ಕ್ಯಾಚ್ ನೀಡಿ ಔಟಾದರು. ಇನ್ನೊಂದು ಕಡೆಯಲ್ಲಿ ನ್ಯಾಟ್ ಸಿವಿರ್ 121 ಎಸೆತಗಳಲ್ಲಿ ಅಜೇಯ 148 ರನ್ಗಳಿಸಿ ನಿರಾಸೆ ಅನುಭವಿಸಿದರು.
ಇಂಗ್ಲೆಂಡ್ 43.4 ಓವರುಗಳಲ್ಲಿ 285 ರನ್ಗಳಿಗೆ ಆಲೌಟ್ ಆಗಿ 71 ರನ್ಗಳ ಸೋಲನುಭವಿಸಿತು. ಜೆಸ್ ಜೊನಾಸನ್ ಮತ್ತು ಅಲೆನಾ ಕಿಂಗ್ ತಲಾ 3 ವಿಕೆಟ್ ಪಡೆದು ಮಿಂಚಿದರು.