ರಕ್ಷಣಾ ವಿಭಾಗದಲ್ಲಿ ಉತ್ತಮ ಆಟದ ಪ್ರದರ್ಶನ ನೀಡುವಲ್ಲಿ ವಿಫಲವಾದ ಬೆಂಗಳೂರು ಬುಲ್ಸ್ ಸೆಮಿಫೈನಲ್ಸ್ ಹಂತದಲ್ಲಿ ಸೋಲು ಕಂಡಿದೆ. ಬುಧವಾರ ನಡೆದ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಬುಲ್ಸ್ 35-40 ರಿಂದ ದಬಾಂಗ್ ದೆಹಲಿ ತಂಡದ ವಿರುದ್ಧ ನಿರಾಸೆ ಅನುಭವಿಸಿದೆ.
ಮಹತ್ವದ ಪಂದ್ಯದಲ್ಲಿ ಬುಲ್ಸ್ ತಂಡದ ರಕ್ಷಣಾ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೊದಲಾವಧಿಯಲ್ಲಿ ಒಂದು ಅಂಕದ ಮುನ್ನಡೆ ಸಾಧಿಸಿದರೂ, ಎರಡನೇ ಅವಧಿಯಲ್ಲಿ ಮಾಡಿದ ತಪ್ಪಿನಿಂದ ಅಂಕಗಳನ್ನು ಎದುರಾಳಿಗೆ ಬಿಟ್ಟುಕೊಟ್ಟು ಪ್ರಶಸ್ತಿ ಸುತ್ತು ಪ್ರವೇಶಿಸುವ ಬುಲ್ಸ್ ಕನಸು ಭಗ್ನ ಗೊಂಡಿದೆ. ಈ ಮೂಲಕ ಶುಕ್ರವಾರ ನಡೆಯಲಿರುವ ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ದಬಾಂಗ್ ತಂಡವನ್ನು ಎದುರಿಸಲಿದೆ. ಸತತ ಎರಡನೇ ಬಾರಿಗೆ ದಬಾಂಗ್ ಟೂರ್ನಿಯ ಫೈನಲ್ ಪ್ರವೇಶಿಸಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲಾವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ 17-16ರಿಂದ ದಬಾಂಗ್ ವಿರುದ್ಧ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಬುಲ್ಸ್ 11 ದಾಳಿಯಲ್ಲಿ ಕಲೆ ಹಾಕಿದರೆ, ಟ್ಯಾಕಲ್ ನಲ್ಲಿ 5 ಅಂಕ ಸೇರಿಸಿತು. ದಬಾಂಗ್ ತಂಡ ಟ್ಯಾಕಲ್ ನಲ್ಲಿ 6 ಅಂಕ ಸೇರಿಸಿತು. ಈ ಅವಧಿಯಲ್ಲಿ ಆತಿಥೇಯ ತಂಡ ಒಂದು ಬಾರಿ ಆಲೌಟ್ ಆಯಿತು.
ಎರಡನೇ ಅವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಅಬ್ಬರಿಸುವ ಸೂಚನೆ ನೀಡಿತು. ದೆಹಲಿ ತಂಡದ ಉತ್ತಮ ರಕ್ಷಣಾ ಆಟದ ಎದುರು ಬುಲ್ಸ್ ಅಂಕಗಳನ್ನು ಪೇರಿಸುವಲ್ಲಿ ವಿಫಲವಾಯಿತು. ಈ ಅವಧಿಯಲ್ಲಿ ನೀರಜ್ ನರ್ವಾಲ್ ಸೂಪರ್ ರೇಡ್ ಮಾಡಿ ಮಿಂಚಿದರು. ಟ್ಯಾಕಲ್ ನಲ್ಲಿ ಅಂಕಗಳನ್ನು ಬಾಚಿಕೊಳ್ಳುವಲ್ಲಿ ಎಡವಿದ ಬೆಂಗಳೂರು ತಂಡ ಎದುರಾಳಿಗಳಿಂದ ಪಂದ್ಯವನ್ನು ಕಸಿದು ಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿತು. ಕೊನೆಯ ಕ್ಷಣದವರೆಗೂ ಅಂಕಗಳಿಸಿ ಮುನ್ನಡೆ ಸಾಧಿಸುವ ಬೆಂಗಳೂರು ತಂಡದ ಆಸೆಗೆ ಪೆಟ್ಟು ಬಿದ್ದಿದೆ.