ಬುಧವಾರ ನಡೆದ ಮೊದಲ ಸೆಮಿಫೈನಲ್ಸ್ ಪಂದ್ಯದಲ್ಲಿ ಪಾಟ್ನಾ 38-27 ರಿಂದ ಯು.ಪಿ ಯೋಧಾ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಎಲಿಮಿನೇಟರ್ ಮೂಲಕ ಸೆಮಿಫೈನಲ್ಸ್ ತಲುಪಿದ್ದ ಯು.ಪಿ ಫೈನಲ್ ಪ್ರವೇಶಿಸುವ ಕನಸಿಗೆ ಪಾಟ್ನಾ ಪೆಟ್ಟು ನೀಡಿದೆ. ಈ ಮೂಲಕ ಪಾಟ್ನಾ ನಾಲ್ಕನೇ ಬಾರಿಗೆ ಫೈನಲ್ ಗೆ ಪ್ರವೇಶಿಸಿದೆ.
ಪಾಟ್ನಾ ಪರ ಗುಮಾನ್ 19 ಬಾರಿ ದಾಳಿ ನಡೆಸಿ 8 ಬಾರಿ ಯೋಧಾ ಆಟಗಾರರನ್ನು ಔಟ್ ಮಾಡಿದರು. ಉಳಿದಂತೆ, ಸಚಿನ್ 7, ಆಲ್ ರೌಂಡರ್ 6 ಅಂಕ ಸೇರಿಸಿತು. ಯು.ಪಿ ಪರ ಅನುಭವಿ ಆಟಗಾರ ಪ್ರದೀಪ್ ನರ್ವಾಲ್ 4, ಆಶು ಸಿಂಗ್ 5 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
ಮೊದಲಾವಧಿಯ ಆಟದಲ್ಲಿ ಪಾಟ್ನಾ 23-9ರಿಂದ ಯು.ಪಿ ವಿರುದ್ಧ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಪೈರೇಟ್ಸ್ ದಾಳಿಯಲ್ಲಿ 10 ಅಂಕಗಳನ್ನು ಕಲೆ ಹಾಕಿದರೆ, ಟ್ಯಾಕಲ್ ನಲ್ಲಿ 9 ಅಂಕ ಸೇರಿಸಿ ಅಬ್ಬರಿಸಿತು. ಈ ಅವಧಿಯಲ್ಲಿ ಯು.ಪಿ ತಂಡ ಎರಡು ಬಾರಿ ಆಲೌಟ್ ಆಯಿತು.
ಎರಡನೇ ಅವಧಿಯ ಆಟದಲ್ಲಿ ಪುಟಿದೇಳುವ ಸೂಚನೆ ನೀಡಿದ್ದ ಯು.ಪಿ ಮುನ್ನಡೆ ಸಾಧಿಸಿದರೂ, ಹೆಚ್ಚು ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲವಾಯಿತು. ಈ ವೇಳೆ ಯು.ಪಿ ದಾಳಿಯಲ್ಲಿ 10 ಅಂಕ, ಟ್ಯಾಕಲ್ ನಲ್ಲಿ 5 ಅಂಕ ಸೇರಿಸಿತು. ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು.