16ನೇ ಆವೃತ್ತಿಯ ಐಪಿಎಲ್ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 77 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಕ್ವಾಲಿಫೈರ್ 1ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರ ಬಿದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223 ರನ್ ಕಲೆ ಹಾಕಿತು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಕಲೆ ಹಾಕಿತು.
ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೆ (52 ಎಸೆತ, 87 ರನ್)ಹಾಗೂ ಋತುರಾಜ್ ಗಾಯಕ್ವಾಡ್ (50 ಎಸೆತ, 79 ರನ್) ಮೊದಲ ವಿಕೆಟ್ಗೆ 141 ರನ್ ಸೇರಿಸಿದರು. 7 ಸಿಕ್ಸರ್ ಸಿಡಿಸಿದ ಋತುರಾಜ್ ಗಾಯಕ್ವಾಡ್ ಸಾಕಾರಿಯಾಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಶಿವಂ ದುಬೆ 22 ರನ್ ಗಳಿಸಿ ಖಲೀಲ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು. ಶತಕದತ್ತ ಮುನ್ನಗುತ್ತಿದ್ದ ಡೆವೊನ್ ಕಾನ್ವೆ ವೇಗಿ ನೋಟ್ರ್ಜೆಗೆ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಬಂದ ರವೀಂದ್ರ ಜಡೇಜಾ ಅಜೇಯ 20 ರನ್ ಗಳಿಸಿದರು.
ಖಲೀಲ್ ಅಹ್ಮದ್, ನೋಟ್ರ್ಜೆ ಹಾಗು ಚೇತನ್ ಸಾಕಾರಿಯಾ ತಲಾ 1 ವಿಕೆಟ್ ಪಡೆದರು.
224 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ವೇಗಿ ದೀಪಕ್ ಚಾಹರ್ ದಾಳಿಗೆ ತತ್ತರಿಸಿ ಹೋಯಿತು. ನಾಯಕ ಡೇವಿಡ್ ವಾರ್ನರ್ (58 ಎಸೆತ, 86 ರನ್) ಏಕಾಂಗಿ ಹೋರಾಟ ಮಾಡಿ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಿಂದ ಪಾರು ಮಾಡಿದರು.
ಅಕ್ಸರ್ ಪಟೇಲ್ 15 ರನ್ ಹೊಡೆದಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು 15 ರನ್ಗಳ ಗಡಿ ದಾಟಲಿಲ್ಲ. ಯಶ್ `ಧೂಲ್ 13, ಪೃಥ್ವಿ ಶಾ 5, ಫಿಲ್ ಸಾಲ್ಟ್ 3, ರುಸೌ 0, ಯಶಸ್ 13, ಅಮಾನ್ ಹಕೀಮ್ 7, ಲಲಿತ್ ಯಾದವ್ 6 ರನ್ ಗಳಿಸಿದರು.
ಚೆನ್ನೈ ಪರ ದೀಪಕ್ ಚಾಹರ್ 22ಕ್ಕೆ 3, ಮಹೀಶ್ ತೀಕ್ಷ್ಣ 23ಕ್ಕೆ 2, ಮಥೀಶಾ ಪತರನ 22ಕ್ಕೆ 2, ತುಷಾರ್ ದೇಶಪಾಂಡೆ 26ಕ್ಕೆ 1, ರವೀಂದ್ರ ಜಡೇಜಾ 50ಕ್ಕೆ 1 ವಿಕೆಟ್ ಪಡೆದರು.