ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಗಮನ ಸೆಳೆದಿರುವ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಯುವ ಆಲ್ರೌಂಡರ್ ರಿಯಾನ್ ಪರಾಗ್, ಸದ್ದಿಲ್ಲದೆ ಟೀಂ ಇಂಡಿಯಾದ(Team India) ಕದ ತಟ್ಟುತ್ತಿದ್ದಾರೆ.
ಭಾರತ ತಂಡ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮಾಡಬಲ್ಲ ಸಮರ್ಥ ಆಟಗಾರರ ಹುಡುಕಾಟದಲ್ಲಿದೆ. ಇದರ ಬೆನ್ನಲ್ಲೇ ರಿಯಾನ್ ಪರಾಗ್, ದೇಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸದ್ದಿಲ್ಲದೆ ಟೀಂ ಇಂಡಿಯಾದ ಕದ ತಟ್ಟುತ್ತಿದ್ದಾರೆ. ನವೆಂಬರ್ 28ರಂದು ನಡೆದ ವಿಜಯ್ ಹಜಾ಼ರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಸ್ಸಾಂ ಪರವಾಗಿ ಆಡಿದ ರಿಯಾನ್ ಪರಾಗ್, ಜಮ್ಮು ಕಾಶ್ಮೀರ ತಂಡದ ವಿರುದ್ಧ ಅಮೋಘ ಶತಕ ಸಿಡಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಪರಾಗ್, ಕೇವಲ 116 ಬಾಲ್‌ಗಳಲ್ಲಿ 12 ಬೌಂಡರಿ, 12 ಸಿಕ್ಸ್ ನೆರವಿನಿಂದ 174 ರನ್‌ಗಳಿಸಿ ಅಸ್ಸಾಂ ತಂಡಕ್ಕೆ ಗೆಲುವು ತಂದುಕೊಟ್ಟರು.
ಆದರೆ ರಿಯಾನ್ ಪರಾಗ್ ಪ್ರಸಕ್ತ ವರ್ಷದ ವಿಜಯ್ ಹಜಾ಼ರೆ ಟ್ರೋಫಿಯಲ್ಲಿ ಈಗಾಗಲೇ ಗಮನಾರ್ಹ ಪ್ರದರ್ಶನ ನೀಡಿದ್ದು, ಮೂರು ಶತಕ ಹಾಗೂ ಒಂದು ಅರ್ಧಶತಕವನ್ನ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಸಕ್ತ ಸಾಲಿನ ವಿಜಯ್ ಹಜಾ಼ರೆ ಟ್ರೋಫಿಯಲ್ಲಿ ರಿಯಾನ್ ಪರಾಗ್, ಆಡಿರುವ 8 ಇನ್ನಿಂಗ್ಸ್‌ನಲ್ಲಿ 537 ರನ್‌ಗಳಿಸಿದ್ದು, 76.71ರ ಬ್ಯಾಟಿಂಗ್ ಸರಾಸರಿ ಹಾಗೂ 123.44ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 21 ವರ್ಷದ ರಿಯಾನ್ ಪರಾಗ್ ಐಪಿಎಲ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದು, ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ದೇಸಿ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿರುವ ಪರಾಗ್, ಟೀಂ ಇಂಡಿಯಾ ಆಯ್ಕೆದಾರರ ಗಮನ ಸೆಳೆಯುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.