ಎಂಟನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ರೋಚಕ ಹಂತ ಬಂದು ತಲುಪಿದೆ. ಎಲ್ಲ ತಂಡಗಳು ಮುಂದಿನ ಹಂತದ ಕನಸು ಕಾಣುತ್ತಿವೆ. ಅಗ್ರ ತಂಡಗಳು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿವೆ. ಶುಕ್ರವಾರ ನಡೆಯಲಿರುವ ಲೀಗ್ ನ 93ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದೆಹಲಿ ಕೆ.ಸಿ ತಂಡಗಳು ಕಾದಾಟ ನಡೆಸಲಿವೆ.
ಈ ಪಂದ್ಯದಲ್ಲಿ ಗೆದ್ದರೆ ಅಗ್ರ ಸ್ಥಾನ ಬುಲ್ಸ್ ತಂಡಕ್ಕೆ ಲಭಿಸುತ್ತದೆ. ಒಂದು ವೇಳೆ ದೆಹಲಿ ಈ ಪಂದ್ಯದಲ್ಲಿ ಜಯ ಸಾಧಿಸಿದರೂ ಅಗ್ರ ಸ್ಥಾನ ಉಳಿಸಿಕೊಳ್ಳಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೇ ಲೀಗ್ ನಲ್ಲಿ ಎರಡೂ ತಂಡಗಳು ಮೊದಲು ಮುಖಾಮುಖಿಯಾಗುದ್ದವು. ಈ ಪಂದ್ಯದಲ್ಲಿ ಬುಲ್ಸ್ 61-22ರಿಂದ ದಬಾಂಗ್ ತಂಡವನ್ನು ಮಣಿಸಿ ಅಬ್ಬರಿಸಿತ್ತು.
ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ದಬಾಂಗ್ 16 ಪಂದ್ಯಗಳಲ್ಲಿ 54 ಅಂಕ ಸೇರಿಸಿದರೆ, ಬುಲ್ಸ್ 17 ಪಂದ್ಯಗಳಲ್ಲಿ 51 ಅಂಕ ಬಾಚಿಕೊಂಡಿದೆ. ಅಗ್ರ ಸ್ಥಾನದಲ್ಲಿರುವ ಎರಡೂ ತಂಡಗಳು ಗೆಲುವಿನ ಪ್ಲಾನ್ ಮಾಡಿಕೊಂಡಿವೆ.
ಯು.ಪಿ ಯೋಧಾ ವಿರುದ್ಧ ಗೆಲುವಿನ ವಿಶ್ವಾಸದಲ್ಲಿರುವ ಬುಲ್ಸ್ ಗೆಲುವಿನ ಓಟವನ್ನು ಮುಂದುವರೆಸುವ ಯೋಜನೆಯನ್ನು ಹಣೆದುಕೊಂಡಿದೆ. ಇನ್ನು ಜೈಪುರ್ ವಿರುದ್ಧ ದಬಾಂಗ್ ದೆಹಲಿ ತಂಡ ಸೋತು ನಿರಾಸೆ ಅನುಭವಿಸಿದೆ. ಬೆಂಗಳೂರು ತಂಡದ ಪವನ್ ಸೆಹ್ರಾವತ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು 17 ಪಂದ್ಯಗಳಲ್ಲಿ 175 ಅಂಕ ಕಲೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.