ಬೆಂಗಳೂರು ಬುಲ್ಸ್ ತಂಡ, ಮಂಗಳವಾರ ನಡೆದ ಪ್ರೊ ಕಬಡ್ಡಿ ಪಂದ್ಯಾವಳಿಯ 87 ನೇ ಲೀಗ್ ಪಂದ್ಯದಲ್ಲಿ ಯು.ಪಿ.ಯೋಧಾ ತಂಡದ ವಿರುದ್ಧ ಐದು ಅಂಕಗಳ ಜಯ ದಾಖಲಿಸಿತು.
ಬೆಂಗಳೂರು ಬುಲ್ಸ್ ತಂಡ ತಂಡ 31 ಅಂಕ ಕಲೆಹಾಕಿದರೆ, ಪರಾಜಿತ ಯು.ಪಿ.ಯೋಧಾ ತಂಡ 26 ಅಂಕಗಳನ್ನು ಸೇರಿಸಿತು. ವಿರಾಮದ ವೇಳೆಗೆ ಬೆಂಗಳೂರು ಬುಲ್ಸ್ ತಂಡ ಆರು ಅಂಕದಿಂದ ಮುನ್ನಡೆ ಸಾಧಿಸಿತ್ತು. ಬೆಂಗಳೂರು ಬುಲ್ಸ್ ತಂಡ 19 ಅಂಕ ಸೇರಿಸಿದ್ದರೆ, ಯು.ಪಿ.ಯೋಧಾ ಹದಿಮೂರು ಅಂಕ ಗಳಿಸಿತ್ತು.
ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡ ಆಡಿದ ಹದಿನೇಳು ಪಂದ್ಯಗಳ ಪೈಕಿ ಒಂಬತ್ತು ಪಂದ್ಯಗಳಲ್ಲಿ ಜಯ ಸಾಧಿಸಿ, ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿ, ಒಂದು ಪಂದ್ಯ ಡ್ರಾ ಮಾಡಿಕೊಂಡು ಒಟ್ಟು 51 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿಯಿತು.
ಬೆಂಗಳೂರು ತಂಡದ ಸ್ಟಾರ್ ಆಟಗಾರ ಪವನ್ ಸೆಹ್ರಾವತ್ 24 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 6 ಟಚ್, 3 ಬೋನಸ್ ಪಾಯಿಂಟ್ ಕಲೆ ಹಾಕಿದರು. ಇನ್ನೋರ್ವ ರೈಡರ್ ಭರತ್ 7 ಅಂಕ ಸೇರಿಸಿದರು. ಲೆಫ್ಟ್ ಕಾರ್ನರ್ ಡಿಫೆಂಡರ್ ಅಮನ್ ಎಳು ಅಂಕ ತಮ್ಮದಾಗಿಸಿಕೊಂಡರು. ಶ್ರೀಕಾಂತ್ ಜಾದವ್ 6 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ಪಂದ್ಯದಲ್ಲಿ ಒಂದು ಬಾರಿ ಬುಲ್ಸ್ ಎದುರಾಳಿ ತಂಡವನ್ನು ಆಲೌಟ್ ಮಾಡಿತು.