ಐಪಿಎಲ್ ಬಿಸಿಸಿಐ ಪಾಲಿಗೆ ದುಡ್ಡಿನ ಮರ. ಒಂದೊಂದು ಇಂಚಿನಲ್ಲೂ ದುಡ್ಡು ಮಾಡಬಹುದು ಅನ್ನುವುದನ್ನು ಐಪಿಎಲ್ ಹೇಳಿಕೊಟ್ಟಿದೆ. ಬಿಸಿಸಿಐ ತನ್ನ ಜಾಣತನದಿಂದ ವರ್ಷದಿಂದ ವರ್ಷಕ್ಕೆ ದುಡ್ಡಿನ ಥೈಲಿಯನ್ನು ದೊಡ್ಡದು ಮಾಡಿಕೊಳ್ಳುತ್ತಿದೆ. ಮುಂದಿನ 5 ಆವೃತ್ತಿಗಳ ಮಾಧ್ಯಮ ಹಕ್ಕು ವಿತರಣೆ ಬಗ್ಗೆ ಬಿಸಿಸಿಐ ಬಿಡ್ ಕರೆದಿದೆ. ಆದರೆ ಸುಮಾರು 33,000 ಕೋಟಿ ರೂಪಾಯಿಗಳ ಬೇಸ್ ಪ್ರೈಸ್ ಅನ್ನು ನಿಗದಿ ಮಾಡಿದೆ.
ಬಿಸಿಸಿಐ ಲೆಕ್ಕದಲ್ಲಿ ಈಗಿರುವ 10 ತಂಡಗಳು ಮುಂದಿನ ಐದು ವರ್ಷ ಆಡಲಿದೆ. ವರ್ಷಕ್ಕೆ ತಲಾ 74 ಪಂದ್ಯಗಳು ನಡೆಯಲಿವೆ. ಒಟ್ಟು 370 ಪಂದ್ಯಗಳ ಮಾಧ್ಯಮ ಪ್ರಸಾರದ ಹಕ್ಕು ಇದಾಗಿದೆ. ಬಿಸಿಸಿಐ ಲೆಕ್ಕದಲ್ಲಿ ಸುಮಾರು 32, 890 ಕೋಟಿ ರೂಪಾಯಿ ಬೇಸ್ ಪ್ರೈಸ್ ಇದಾಗಿದೆ. ಬಿಡ್ದಾರರು ಇದಕ್ಕಿಂತ ಹೆಚ್ಚು ಬಿಡ್ ಮಾಡಿದರೆ ಮಾತ್ರ ಮಾಧ್ಯಮ ಹಕ್ಕು ಸಿಗಲಿದೆ.
ಅಂದಹಾಗೇ ಬಿಸಿಸಿಐ ಹೆಚ್ಚು ಪಂದ್ಯಗಳನ್ನು ಆಯೋಜಿಸಿದರೆ ಬಿಡ್ ಮಾಡಿರುವ ಮೊತ್ತಕ್ಕೆ ಸಮಾನಾಗಿ ಪ್ರತಿ ಪಂದ್ಯಕ್ಕೂ ಹಣ ನೀಡಬೇಕಾಗತ್ತದೆ. ಅಂದರೆ ಈಗ ಪ್ರತೀ ಸೀಸನ್ನಲ್ಲಿ 74 ಪಂದ್ಯಗಳ ಹಕ್ಕು ಪಡೆಯಲು ಬಿಡ್ ಆಗುತ್ತದೆ. ಆದರೆ ಬಿಸಿಸಿಐ ಹೆಚ್ಚು ಪಂದ್ಯಗಳನ್ನು ಆಯೋಜಿಸಿದರೆ ಪ್ರತೀ ಪಂದ್ಯಕ್ಕೂ ಬಿಡ್ ಮಾಡಿದ ಮೊತ್ತವನ್ನೇ ನೀಡಬೇಕಾಗುತ್ತದೆ.
ಮಾಧ್ಯಮ ಹಕ್ಕನ್ನು 4 ವಿಭಾಗ ಮಾಡಲಾಗಿದೆ. ಭಾರತದಲ್ಲಿ ಟೆಲಿಕಾಸ್ಟ್ ರೈಟ್ಸ್ ಪಡೆಯಬೇಕಾದರೆ ಪ್ರತೀ ಪಂದ್ಯದ ಬೇಸ್ ಪ್ರೈಸ್ 49 ಕೋಟಿ ಆಗಿರುತ್ತದೆ. ಅಂದರೆ 5 ವರ್ಷ ಭಾರತದಲ್ಲಿ ಮಾತ್ರ ಟೆಲಿಕಾಸ್ಟ್ ಮಾಡಲು 18,130 ಕೋಟಿ ರೂಪಾಯಿ ಮೂಲ ಬೆಲೆಯಾಗಿರುತ್ತದೆ. ಇದೇ ವೇಳೆ ಡಿಜಿಟಲ್ ರೈಟ್ಸ್ ಮೂಲ ಬೆಲೆ ಪ್ರತೀ ಪಂದ್ಯಕ್ಕೆ 33 ಕೋಟಿ ರೂಪಾಯಿ. 5 ವರ್ಷಕ್ಕೆ ಸಮಾರು 12,210 ಕೋಟಿಯಾಗಿರುತ್ತದೆ. ಸಾಮಾನ್ಯವಾಗಿ ಟಿವಿ ರೈಟ್ಸ್ ಮತ್ತು ಡಿಜಿಟಲ್ ರೈಟ್ಸ್ ಅನ್ನು ಒಂದೇ ಸಂಸ್ಥೆ ಪಡೆಯಲು ಇಚ್ಛಿಸುತ್ತದೆ.
ಈ ನಡುವೆ 3ನೇ ವಿಭಾಗದ ಮಾಧ್ಯಮ ಹಕ್ಕು ಹರಾಜು ಕೂಡ ನಡೆಯಲಿದೆ. ಸಿ ಕೆಟಗರಿಯ ಈ ಹಕ್ಕು ಕೇವಲ 18 ಪಂದ್ಯಗಳಿಗೆ ಸೀಮಿತವಾಗುತ್ತದೆ. ಈ ರೈಟ್ಸ್ ನ ಮೂಲ ಬೆಲೆ 16 ಕೋಟಿ ರೂಪಾಯಿ ಪ್ರತೀ ಪಂದ್ಯಕ್ಕೆ ಆಗಿರಲಿದೆ. ಈ ಮಾಧ್ಯಮ ಹಕ್ಕು 5 ವರ್ಷಕ್ಕೆ ಸುಮಾರು 1440 ಕೋಟಿ ಮೂಲ ಬೆಲೆಯದ್ದಾಗಿರುತ್ತದೆ. ಇದರಲ್ಲಿ ಉದ್ಘಾಟನಾ ಪಂದ್ಯ, 4 ಪ್ಲೇ ಆಫ್ಗಳು ಮತ್ತು ಡಬಲ್ ಹೆಡರ್ ನ ರಾತ್ರಿ ಪಂದ್ಯಗಳು ಮಾತ್ರ ಒಳಗೊಂಡಿದೆ.
4ನೇ ಮಾಧ್ಯಮ ಹಕ್ಕು ವಿಭಾಗದಲ್ಲಿ ಇಂಟರ್ ನೆಟ್ ಅಥವಾ ವೆಬ್ ಲೈವ್ ಅಪ್ ಡೇಟ್ ಆಗುತ್ತದೆ. ಪ್ರತೀ ಪಂದ್ಯಕ್ಕೂ 3 ಕೋಟಿ ಮೂಲ ಬೆಲೆ ಇರಲಿದೆ. ಇದರಿಂದ 5 ವರ್ಷಕ್ಕೆ ಕನಿಷ್ಠ ಅಂದರೂ ಬಿಸಿಸಿಐ 1110 ಕೋಟಿ ರೂಪಾಯಿ ಇರಲಿದೆ. ಆದರೆ ಈ ಹಕ್ಕು ಪಡೆದವರು ಭಾರತದಲ್ಲಿ ಅಪ್ ಡೇಟ್ ಗಳನ್ನು ತೋರಿಸುವ ಹಾಗಿಲ್ಲ ಅನ್ನು ನಿಯಮವಿದೆ.
ಮುಖ್ಯ ಅಂಶಗಳು
ಎ ವಿಭಾಗ: ಭಾರತದಲ್ಲಿ ಟಿವಿ ರೈಟ್ಸ್: ಪ್ರತೀ ಪಂದ್ಯದ ಮೂಲ ಬೆಲೆ 49 ಕೋಟಿ ರೂಪಾಯಿ
ಬಿ ವಿಭಾಗ: ಭಾರತದಲ್ಲಿ ಡಿಜಿಟಲ್ ರೈಟ್ಸ್: ಪ್ರತೀ ಪಂದ್ಯದ ಮೂಲ ಬೆಲೆ 33 ಕೋಟಿ ರೂಪಾಯಿ
ಸಿ ವಿಭಾಗ: ಉದ್ಘಾಟನಾ ಪಂದ್ಯ, 4 ಪ್ಲೇ-ಆಫ್ ಮತ್ತು ಡಬಲ್ ಹೆಡರ್ನ ರಾತ್ರಿ ಪಂದ್ಯ ಸೇರಿ 18 ಪಂದ್ಯದ ಡಿಜಿಟಲ್ ಹಕ್ಕು- ಪ್ರತೀ ಪಂದ್ಯದ ಮೂಲ ಬೆಲೆ 16 ಕೋಟಿ
ಡಿ ವಿಭಾಗ: ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಹೊರತು ಪಡಿಸಿ ಟಿವಿ ರೈಟ್ಸ್- ಪ್ರತೀ ಪಂದ್ಯದ ಮೂಲ ಬೆಲೆ 3 ಕೋಟಿ ರೂಪಾಯಿ
ಜೂನ್ 12 ರಂದು ಬಿಸಿಸಿಐ ಮಾಧ್ಯಮ ಹಕ್ಕು ಹರಾಜು ನಡೆಯಲಿದೆ. ಬಿಸಿಸಿಐ ಪ್ರತೀ ಪಂದ್ಯಗಳಿಂದ ಸುಮಾರು 90 ಕೋಟಿ ರೂಪಾಯಿ ನಿರೀಕ್ಷೆ ಇಟ್ಟುಕೊಂಡಿದೆ. ಹೀಗಾಗಿ ಮಾಧ್ಯಮ ಹಕ್ಕು 45 ಸಾವಿರ ಕೋಟಿಯಿಂದ 55 ಸಾವಿರ ಕೋಟಿ ತನಕ ಏರಿಕೆ ಆಗಬಹುದು ಅನ್ನುವ ಲೆಕ್ಕಾಚಾರದಲ್ಲಿದೆ.