ಐಸಿಸಿ ಮಹಿಳಾ ವಿಶ್ವಕಪ್ನಲ್ಲೀಗ ಸೆಮಿಫೈನಲ್ ಹೋರಾಟದ ಕಾವು. ಲೀಗ್ ಪಂದ್ಯಗಳಲ್ಲಿ ಉತ್ತಮ ಆಟ ಆಡಿದ 4 ತಂಡಗಳು ಈಗ ಸೆಮಿಫೈನಲ್ ಹೋರಾಟಕ್ಕೆ ಸಜ್ಜಾಗಿವೆ. ವೆಲ್ಲಿಂಗ್ಟನ್ನಲ್ಲಿ ನಡೆಯುವ ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ, ವೆಸ್ಟ್ಇಂಡೀಸ್ ತಂಡವನ್ನು ಎದುರಿಸಲಿದೆ.
ಆಸ್ಟ್ರೇಲಿಯಾದ ಬಲಕ್ಕೆ ವಿಂಡೀಸ್ ಸಾಟಿಯಲ್ಲ. ಆಸೀಸ್ ಲೀಗ್ ಹಂತದಲ್ಲಿ ಆಡಿದ 7 ಪಂದ್ಯಗಳನ್ನೂ ಗೆದ್ದು ಅಜೇಯ ತಂಡವಾಗಿದೆ. ವೆಸ್ಟ್ಇಂಡೀಸ್ ಅದೃಷ್ಟದ ಬೆಂಬಲ ಪಡೆದು ನಾಲ್ಕರ ಘಟ್ಟ ಪ್ರವೇಶಿಸಿದೆ. ವಿಂಡೀಸ್ 3ಪಂದ್ಯಗಳನ್ನು ಗೆದ್ದು, ಮೈನಸ್ ರನ್ ರೇಟ್ ಇದ್ದರೂ, ಕೊನೆಯ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ 7 ಅಂಕ ಸಂಪಾದಿಸಿ ಭಾರತವನ್ನು ಹಿಂದಿಕ್ಕಿ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ.
ಆಸ್ಟ್ರೇಲಿಯಾದ ಬ್ಯಾಟಿಂಗ್ ಸ್ಪೋಟಕ ಶಕ್ತಿ ಹೊಂದಿದೆ. ಅಲಿಸಾ ಹೀಲಿ, ರಾಶೆಲ್ ಹೇಯ್ನ್ಸ್, ಮೆಗ್ ಲ್ಯಾನಿಂಗ್ ಮತ್ತು ಬೆಥ್ ಮೂನಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಆ್ಯಶ್ಲೇ ಗಾರ್ಡನರ್, ಅನಬೆಲ್ ಸದರ್ಲಂಡ್ ಕೂಡ ಬ್ಯಾಟಿಂಗ್ ಶಕ್ತಿ ಹೊಂದಿದ್ದಾರೆ. ಎಲಿಸ್ ಪೆರ್ರಿ ಗಾಯಗೊಂಡಿರಿವುದರಿಂದ ಆಸ್ಟ್ರೇಲಿಯಾ ಅಲನಾ ಕಿಂಗ್ರನ್ನು ಆಡಿಸಬೇಕಿದೆ. ಜೆಸ್ ಜೊನಾಸನ್, ಡಾರ್ಸಿ ಬ್ರೌನ್, ಮೆಗ್ಗನ್ ಶುಟ್ ಪ್ರಮುಖ ಬೌಲರ್ಗಳು.
ವೆಸ್ಟ್ಇಂಡೀಸ್ ಹೇಳಿಕೊಳ್ಳುವ ಶಕ್ತಿ ಹೊಂದಿಲ್ಲ. ಡಿಯಾಂಡ್ರ ಡಾಟಿನ್, ಸ್ಟೆಫಾನಿ ಟೇಲರ್ ಮತ್ತು ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್ ಶಕ್ತಿ ಮೇಲೆ ಎಲ್ಲವೂ ನಿಂತಿದೆ. ಬೌಲಿಂಗ್ನಲ್ಲೂ ಮ್ಯಾಥ್ಯೂಸ್ ಪ್ರಮುಖ ಅಸ್ತ್ರವಾಗಿದ್ದಾರೆ.
ವೆಲ್ಲಿಂಗ್ಟನ್ ಪಿಚ್ ಆರಂಭದಲ್ಲಿ ಕೊಂಚ ವೇಗಿಗಳಿಗೆ ನೆರವು ನೀಡಲಿದೆ. ಬೌನ್ಸ್ ಹೆಚ್ಚಿರುವ ಕಾರಣದಿಂದ ಬ್ಯಾಟರ್ಗಳಿಗೂ ನೆರವು ಸಿಗಲಿದೆ. ಒಟ್ಟಿನಲ್ಲಿ ಫೈನಲ್ ಪ್ರವೇಶ ಪಡೆಯಲು ಎರಡೂ ತಂಡಗಳ ನಡುವೆ ಫೈಟ್ ಜೋರಾಗಿದೆ.