Hardik Pandya- ರಣಜಿ ಆಡಲ್ಲ… ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ..ಆದ್ರೆ ಐಪಿಎಲ್ ಆಡ್ತಾರೆ..! ಹಾರ್ದಿಕ್ ಪಾಂಡ್ಯ ಏನು ಸಮಾಚಾರ..!
ಹಾರ್ದಿಕ್ ಪಾಂಡ್ಯ.. ಟೀಮ್ ಇಂಡಿಯಾದ ಆಲ್ ರೌಂಡರ್. ಕಳೆದ ಟಿ-20 ವಿಶ್ವಕಪ್ ನಂತರ ಟೀಮ್ ಇಂಡಿಯಾದಿಂದ ದೂರವೇ ಉಳಿದುಕೊಂಡಿದ್ದಾರೆ. ಯಾಕೆ ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಅಂದ ಹಾಗೇ, ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮಾಡಿದ್ರೂ ಬೌಲಿಂಗ್ ಮಾಡುತ್ತಿಲ್ಲ. ಹಂಡ್ರೆಡ್ ಪರ್ಸೆಂಟ್ ಫಿಟ್ ಇಲ್ಲ. ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಪ್ರಯತ್ನವೂ ಮಾಡುತ್ತಿಲ್ಲ. ಇನ್ನೊಂದೆಡೆ ರಣಜಿ ಟೂರ್ನಿಯಲ್ಲೂ ಆಡುತ್ತಿಲ್ಲ. ಇತ್ತ ಆಯ್ಕೆ ಸಮಿತಿಯೂ ಪಾಂಡ್ಯ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿಯೇ ಹಾರ್ದಿಕ್ ಪಾಂಡ್ಯ ಏನು ಸಮಾಚಾರ ಅಂತ ಕೇಳುವ ಸಮಯ ಬಂದಿದೆ.
ಹೌದು, ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಲ್ಲಿ ಇರಬೇಕು. ಅದ್ಭುತ ಪ್ರತಿಭಾನ್ವಿತ ಆಟಗಾರ. ಆದ್ರೆ ಏನು ಮಾಡೋದು.. ಸ್ವಲ್ಪ ಧಿಮಾಕ್ ಜಾಸ್ತಿ. ಕಷ್ಟಪಟ್ಟು ಕ್ರಿಕೆಟ್ ಆಟಗಾರನಾಗಿರುವ ಪಾಂಡ್ಯ ಈಗ ಎಲ್ಲವನ್ನೂ ಮರೆತಂತೆ ಕಾಣುತ್ತಿದೆ. ಮನಿ, ನೇಮ್, ಫೇಮ್ ಬಂದ ನಂತರ ಹಾರ್ದಿಕ್ ಪಾಂಡ್ಯ ಕೂಡ ಬದಲಾಗಿದ್ದಾರೆ. ಶೋಕಿ ಜೀವನ ಶೈಲಿಯನ್ನು ಹೊಂದಿದ್ರೂ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಹಾರ್ದಿಕ್ ಪಾಂಡ್ಯ ಅವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಏಕಾಂಗಿ ಹೋರಾಟ, ಸ್ಫೋಟಕ ಆಟದ ಮೂಲಕವೇ ಗಮನ ಸೆಳೆಯುವ ಹಾರ್ದಿಕ್ ಪಾಂಡ್ಯ ಸದ್ಯದ ಹಾದಿ ಅಷ್ಟೊಂದು ಸುಗಮವಾಗಿಲ್ಲ.
ಯಾಕಂದ್ರೆ ಟೀಮ್ ಇಂಡಿಯಾ ಇಂದು ಯಾರನ್ನು ನೆಚ್ಚಿಕೊಂಡಿಲ್ಲ. ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹಾಗಾಗಿ ಫಾರ್ಮ್, ಫಿಟ್ ನೆಸ್ ಇದ್ರೆ ಮಾತ್ರ ತಂಡದಲ್ಲಿ ಸ್ಥಾನ. ಆಯ್ಕೆ ಸಮಿತಿಯು ಯಾರನ್ನು ಕ್ಯಾರೇ ಮಾಡಲ್ಲ. ಟೀಮ್ ಇಂಡಿಯಾ ಯಾವೊಬ್ಬ ಆಟಗಾರನನ್ನು ನಂಬಿಕೊಂಡು ಕುಳಿತಿಲ್ಲ.
ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ 15ನೇ ಐಪಿಎಲ್ ಟೂರ್ನಿಯಲ್ಲಿಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಹುಶಃ ಹಾರ್ದಿಕ್ ಪಾಂಡ್ಯ ಐಪಿಎಲ್ ಟೂರ್ನಿಯನ್ನು ಎದುರು ನೊಡುತ್ತಿದ್ದಾರೆ. ಈ ಕಾರಣದಿಂದಲೇ ರಣಜಿ ಟೂರ್ನಿಯನ್ನು ಆಡಿಲ್ಲ. ಲಂಕಾ ಸರಣಿಗೂ ಆಯ್ಕೆಯಾಗಿಲ್ಲ. ಹಾರ್ದಿಕ್ ಪಾಂಡ್ಯ ಮನಸ್ಥಿತಿ ಹೀಗೆ ಮುಂದುವರಿದ್ರೆ ಮುಂದಿನ ದಿನಗಳಲ್ಲಿ ಸುರೇಶ್ ರೈನಾ ಅವರಿಗೆ ಆದ ಅವಮಾನ ಹಾರ್ದಿಕ್ ಪಾಂಡ್ಯಗೂ ಬರಬಹುದು. ಯಾವುದಕ್ಕೂ ಎಚ್ಚರಿಕೆ ಮತ್ತು ಜಾಗೃತೆಯಿಂದ ಇರೋದು ಒಳ್ಳೆಯದ್ದು.
ಈ ನಡುವೆ, ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಸ್ಪಷ್ಟವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಂಡ್ರೆಡ್ ಪರ್ಸೆಂಟ್ ಫಿಟ್ ಆಗಿದ್ರೆ ಖಂಡಿತವಾಗಿಯೂ ಟೀಮ್ ಇಂಡಿಯಾಗೆ ಆಯ್ಕೆಯಾಗುತ್ತಾರೆ ಅಂತ ಹೇಳಿದ್ದಾರೆ.
ಆದ್ರೆ ರಣಜಿ ಟೂರ್ನಿಯನ್ನು ಯಾಕೆ ಸ್ಕಿಪ್ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಪ್ರಶ್ನೆಗೆ ನೀವು ಹಾರ್ದಿಕ್ ಪಾಂಡ್ಯ ಅವರನ್ನೇ ಕೇಳಬೇಕು ಎಂದು ಹೇಳಿದ್ರು. Ask Hardik pandya why he is not playing Ranji Trophy: Chetan sharma
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಭಾಗ. ಹಾಗಂತ ಫಿಟ್ ನೆಸ್ ಮತ್ತು ಫಾರ್ಮ್ ಕೂಡ ಮಹತ್ವದ್ದಾಗಿರುತ್ತದೆ ಎಂದು ಹೇಳಿದ್ರು.
ಇದೇ ವೇಳೆ ಚೇತನ್ ಶರ್ಮಾ ಅವರು ಪತ್ರಕರ್ತರ ಪ್ರಶ್ನೆಗೆ ತುಸು ಕೋಪದಿಂದಲೇ ಉತ್ತರಿಸಿದ್ರು. ತಮ್ಮ ಫಿಟ್ ನೆಸ್ ಸ್ಥಿತಿಯನ್ನು ಯಾಕೆ ಬಹಿರಂಗಪಡಿಸುತ್ತಿಲ್ಲ ಎಂಬುದನ್ನು ಅವರನ್ನೇ ಕೇಳಿ. ನಿಮ್ಮ ಬಳಿ ಅವರ ಮೊಬೈಲ್ ಸಂಖ್ಯೆ ಇದ್ದೇ ಇರುತ್ತದೆ. ಆದ್ರೆ ಅವರು ಆಯ್ಕೆಯಾಗುತ್ತಾರೋ ಇಲ್ಲವೋ ಎಂಬುದನ್ನು ಹೇಳಲು ನೀವು ಆಯ್ಕೆ ಸಮಿತಿಯ ಸದಸ್ಯರಲ್ಲ. ಐದು ಮಂದಿ ಆಯ್ಕೆ ಸಮಿತಿ ಸದಸ್ಯರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ನೀವು ಆತನನ್ನು ಬೆಂಬಲಿಸಿ. ಆದ್ರೆ ಆತನ ಹಿಂದೆ ಹೋಗಬೇಡಿ. ಹಾರ್ದಿಕ್ ಪಾಂಡ್ಯ ಕಷ್ಟದ ದಿನದಲ್ಲಿದ್ದಾರೆ. ಅವರನ್ನು ಕೆಳಗೆ ಬೀಳಿಸಬೇಡಿ. ದೇಶಕ್ಕಾಗಿ ಹಾರ್ದಿಕ್ ಪಾಂಡ್ಯ ಏನು ಮಾಡಿದ್ದಾರೆ ಎಂಬುದನ್ನು ಒಂದು ನಿಮಿಷದಲ್ಲಿ ಮರೆಯುವ ಸಂಗತಿಯಲ್ಲ. ಆತನಿಗೆ ಬೆಂಬಲ ನೀಡಿ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಒಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ. ಬ್ಯಾಟಿಂಗ್ ಮಾಡಿದ್ರೂ ಬೌಲಿಂಗ್ ಮಾಡಲು ಆಗುತ್ತಿಲ್ಲ. ಹೀಗಾಗಿಯೇ ಹಾರ್ದಿಕ್ ಪಾಂಡ್ಯ ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ.