ಕೊನೆ ಓವರ್ವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿದ ಶ್ರೀಲಂಕಾ, ಐದು ಪಂದ್ಯಗಳ ಟಿ20 ಸರಣಿಯ ಕೊನೆ ಪಂದ್ಯದಲ್ಲಿ ಜಯದ ನಗೆಬೀರಿದೆ.
ಮೆಲ್ಬೋರ್ನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್(43*) ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಶ್ರೀಲಂಕಾ, 19.5 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 155 ರನ್ಗಳಿಸಿ ಗೆಲುವಿನ ದಡಸೇರಿತು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಆರಂಭಿಕ ಆಘಾತ ಅನುಭವಿಸಿತು. ಓಪನರ್ಗಳಾಗಿ ಕಣಕ್ಕಿಳಿದ ನಾಯಕ ಆರನ್ ಫಿಂಚ್(8) ಹಾಗೂ ಬೆನ್ ಮೆಕ್ಡರ್ಮಾಟ್(3) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಬಳಿಕ ಬಂದ ಜೋಶ್ ಇಂಗ್ಲಿಸ್(23) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(29) 3ನೇ ವಿಕೆಟ್ಗೆ 43 ರನ್ಗಳ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರೆ. ನಂತರ ಬಂದ ಆಲ್ರೌಂಡರ್ ಮಾರ್ಕಸ್ ಸ್ಟಾಯ್ನಿಸ್(17) ರನ್ಗಳಿಸಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ವೇಡ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಲಂಕಾ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದ ವೇಡ್, 27 ಬಾಲ್ಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 43 ರನ್ಗಳಿಸಿ, ತಂಡದ ಮೊತ್ತವನ್ನ 150ರ ಗಡಿದಾಟಿಸಿದರು. ಇವರಿಗೆ ಡ್ಯಾನಿಯಲ್ ಸ್ಯಾಮ್ಸ್(18) ಸಾಥ್ ನೀಡಿದರು. ಶ್ರೀಲಂಕಾ ಪರ ಲಹಿರು ಕುಮಾರ ಹಾಗೂ ಚಾಮಿರಾ ತಲಾ 2 ವಿಕೆಟ್ ಪಡೆದರು.
ಆಸೀಸ್ ನೀಡಿದ ಟಾರ್ಗೆಟ್ ಎದುರಿಸಿದ ಶ್ರೀಲಂಕಾ ಸಹ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ಆಗಿ ಬಂದ ಪತುಮ್ ನಿಸ್ಸಂಕಾ(13), ಮೊದಲ ಕ್ರಮಾಂಕದಲ್ಲಿ ಬಂದ ಕಮಿಲ್ ಮಿಶ್ರಾ(1) ತಂಡಕ್ಕೆ ಆಸರೆಯಾಗಲಿಲ್ಲ. ನಂತರ ಬಂದ ಚರಿತ್ ಅಸಲಂಕಾ(20) ಬಿರುಸಿನ ಆಟವಾಡಿ ನಿರ್ಗಮಿಸಿದರೆ, ಜನಿತ್ ಲಿಯಂಗೆ(8) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದ್ರೆ 5ನೇ ವಿಕೆಟ್ ವಿಕೆಟ್ಗೆ ಕುಸಾಲ್ ಮೆಂಡಿಸ್(69*) ಹಾಗೂ ದಸನ್ ಶನಕಾ(35) 83 ರನ್ಗಳ ಅದ್ಭುತ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡಸೇರಿದರು.
ಐದು ಪಂದ್ಯಗಳ ಸರಣಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಸರಣಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು. 5ನೇ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿಗೆ ಕಾರಣವಾದ ಕುಸಲ್ ಮೆಂಡಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಗ್ಲೆನ್ ಮ್ಯಾಕ್ಸ್ವೆಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.