Asia Cup 2022 – Sri Lanka ಹಸಿದರವರ ಹೊಟ್ಟೆ ತುಂಬಿಸಿದ್ದ ಏಷ್ಯಾಕಪ್ ಪ್ರಶಸ್ತಿ..!

ಕೈಯಲ್ಲಿ ದುಡ್ಡಿಲ್ಲ… ತುತ್ತು ಅನ್ನಕ್ಕೂ ಗತಿ ಇಲ್ಲ.. ಓಡಾಡುವ ವಾಹನಗಳಿಗೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಇಲ್ಲ.. ರಾಜಕೀಯ ಅಸ್ಥಿರತೆ, ಆರ್ಥಿಕ ಬಿಕ್ಕಟ್ಟು ದೇಶದ ಪರಿಸ್ಥಿತಿಯನ್ನು ಬುಡಮೇಲು ಮಾಡಿಬಿಟ್ಟಿತ್ತು. ಜನಾಕ್ರೋಶ ಮುಗಿಲು ಮುಟ್ಟಿತ್ತು. ಕೊನೆಗೆ ನಾಗರೀಕರ ದಂಗೆ ಶ್ರೀಲಂಕಾ ದೇಶದ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತ್ತು. ಆದ್ರೂ ಅಲ್ಲಿನ ಜನ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಒಂಚೂರು ಕಮ್ಮಿ ಮಾಡಲಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ರೂ ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಭಾರತದ ವಿರುದ್ಧ ಕ್ರಿಕೆಟ್ ಸರಣಿಯನ್ನು ಆಡಿತ್ತು.

ಶ್ರೀಲಂಕಾ ಆಟಗಾರರು ಆಟದ ಮೇಲಿನ ಬದ್ಧತೆಯನ್ನು ಕಡಿಮೆ ಮಾಡಲಿಲ್ಲ. ಅಭ್ಯಾಸ ನಡೆಸುವ ತಾಣಗಳಿಗೆ ಹೋಗಲು ಒದ್ದಾಟ ನಡೆಸಿದ್ರು. ಆದ್ರೆ ಹಠ ಮಾತ್ರ ಬಿಡಲಿಲ್ಲ. ಕಷ್ಟಪಟ್ಟು ಅಭ್ಯಾಸ ಮಾಡಿದ್ರು. ಕೊನೆಗೆ ತನ್ನ ನೆಲದಲ್ಲೇ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಯು ಕೈ ತಪ್ಪಿ ಹೋಯ್ತು. ಲಂಕಾ ಬದಲು ಏಷ್ಯಾಕಪ್ ಟೂರ್ನಿಯನ್ನು ಯುಎಇನಲ್ಲಿ ಆಯೋಜನೆ ಮಾಡಲಾಗಿತ್ತು.
ಹೌದು, ಟೂರ್ನಿ ಆರಂಭಕ್ಕೆ ಮುನ್ನ ಭಾರತ ಮತ್ತು ಪಾಕಿಸ್ತಾನ ಫೈನಲ್ ಪ್ರವೇಶಿಸುತ್ತವೆ. ಭಾರತ ಪ್ರಶಸ್ತಿ ಗೆಲ್ಲುತ್ತೆ ಎಂದು ಕೆಲವರು ಹೇಳಿದ್ರೆ ಪಾಕ್ ಪ್ರಶಸ್ತಿ ಗೆಲ್ಲುತ್ತೆ ಅಂತ ಇನ್ನು ಕೆಲವರು ಅಂದುಕೊಂಡಿದ್ದರು. ಆದ್ರೆ ಶ್ರೀಲಂಕಾ ಗೆಲ್ಲುತ್ತೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ನಿರೀಕ್ಷೆ ಕೂಡ ಮಾಡಿರಲಿಲ್ಲ.

ನಿಜ, ಶ್ರೀಲಂಕಾ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರು ಇಲ್ಲ. ಆತಿರಥ – ಮಹಾರಥರ ಹಾಗೇ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಆಟಗಾರರೂ ಇಲ್ಲ. ಲಂಕಾ ತಂಡಕ್ಕೆ ಚಾಣಕ್ಯ, ಅಪ್ರತಿಮ ನಾಯಕನೂ ಇಲ್ಲ. ಒಂದು ಕಾಲದ ಬಲಿಷ್ಠ ತಂಡವಾಗಿದ್ದ ಶ್ರೀಲಂಕಾ ತಂಡ ಈಗ ಮಾಮೂಲಿ ತಂಡವಾಗಿದೆ ಅಷ್ಟೇ. ಆದ್ರೆ ಪ್ರತಿಭೆ ಮತ್ತು ಸಾಮಥ್ರ್ಯಕ್ಕೆ ಸ್ವಲ್ಪ ಕೂಡ ಕೊರತೆ ಇರಲಿಲ್ಲ. ಸಾಂಘಿಕ ಅಟ, ಗೆಲ್ಲಬೇಕು ಎಂಬ ಹಠ. ಹಸಿವಿನಿಂದ ಕಂಗೆಟ್ಟರೂ ತಮ್ಮನ್ನು ನಂಬಿದ್ದ ಅಭಿಮಾನಿಗಳ ನಂಬಿಕೆಯನ್ನು ಹುಸಿಗೊಳಿಸಬಾರದು ಅನ್ನೋ ದಿಟ್ಟ ನಿರ್ಧಾರವೇ ಇವತ್ತು ಶ್ರೀಲಂಕಾ ತಂಡವನ್ನು ಏಷ್ಯಾದ ಚಾಂಪಿಯನ್ ಪಟ್ಟದ ಮೇಲೆ ಕೂರಿಸಿದೆ.

ಒಂದು ಸಾಮಾನ್ಯ ತಂಡದ ಅಸಾಮಾನ್ಯ ಸಾಧನೆಯನ್ನು ಮೆಚ್ಚಲೇಬೇಕು. ಶಹಬ್ಬಾಷ್ ಹೇಳಲೇಬೇಕು. 23 ರನ್ ಗಳಿಂದ ಪಾಕ್ ತಂಡವನ್ನು ಮಣಿಸಿ ಆರನೇ ಬಾರಿ ಏಷ್ಯಾಕಪ್ ಗೆದ್ದ ಲಂಕಾ ಆಟಗಾರರ ಆನಂದಕ್ಕೆ ಪಾರವೇ ಇರಲಿಲ್ಲ. ಕ್ರಿಕೆಟ್ ಆಟವನ್ನೇ ಉಸಿರನ್ನಾಗಿದ್ದ ಲಂಕನ್ನರಿಗೆ ಮುಲಾಜಿಲ್ಲದೆ ಪ್ರಶಸ್ತಿಯೂ ಒಲಿದು ಬಂತು. ದುಡ್ಡನ್ನೇ ನಂಬಿಕೊಂಡಿರುವ ಟೀಮ್ ಇಂಡಿಯಾ ಬೇಗನೇ ಮನೆ ಸೇರಿಕೊಂಡಿತ್ತು. ಪಾಕ್ ಆಟಗಾರರ ಅತಿರೇಕದ ವರ್ತನೆಗೆ ತಕ್ಕ ಶಾಸ್ತ್ರಿಯಾಯ್ತು. ಬಾಂಗ್ಲಾದೇಶಕ್ಕೂ ಬುದ್ಧಿ ಕಲಿಸಿತ್ತು. ಅಫಘಾನಿಸ್ತಾನ ತಂಡಕ್ಕೂ ಪಾಠ ಕಲಿಸಿತ್ತು.

ಒಟ್ಟಿನಲ್ಲಿ ಈ ಬಾರಿಯ ಏಷ್ಯಾಕಪ್ ಹಸಿದವರ ಹೊಟ್ಟೆ ತುಂಬಿಸಿತ್ತು. ಕ್ರಿಕೆಟ್ ಆಟವನ್ನೇ ನಂಬಿಕೊಂಡಿದ್ದವರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿತ್ತು.